ಕೆನರಾ ಬ್ಯಾಂಕ್ ಇ ಇನ್ಫೋಬುಕ್ ಸೇವೆ
ಮೈಸೂರು: ಕೆನರಾ ಬ್ಯಾಂಕ್ ಬ್ಯಾಂಕಿಂಗ್ ಸೇವೆಗಳನ್ನು ಸಾಮಾಜಿಕ ತಾಣದ ಮೂಲಕವೇ ಗಾಹಕರಿಗೆ ಮುಟ್ಟಿಸಲು ಮುಂದಾಗಿದ್ದು, ಕೆನರಾ ಇ- ಇನ್ಫೋಬುಕ್ ಸೇವೆಗೆ ಚಾಲನೆ ನೀಡಲಿದೆ.
ತಂತ್ರಜ್ಞಾನದ ಎಲ್ಲ ಪ್ರಯೋಜನ ಪಡೆದುಕೊಂಡು ಗ್ರಾಹಕರಿಗೆ ಸಮಗ್ರ ಸ್ವರೂಪದ ಬ್ಯಾಂಕಿಂಗ್ ಸೇವೆಗಳನ್ನು ಕ್ಷಿಪ್ರಗತಿಯಲ್ಲಿ ಒದಗಿಸಲು ಯತ್ನಿಸಲಾಗುವುದು ಮತ್ತು ಸಾಮಾಜಿಕ ತಾಣವನ್ನೂ ಈ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ತಿಳಿಸಿದ್ದಾರೆ.
ಕೆನರಾ ಇ- ಇನ್ಫೋಬುಕ್ ಅಪ್ ಆಂಡ್ರಾಯ್ಡ್ ಮತ್ತು ವಿಂಡೋಸ್ ನಿರ್ವಹಣೆಯ ಆಧುನಿಕ ಮೊಬೈಲ್ ಫೋನ್ಗಳಲ್ಲಿ ಲಭ್ಯವಾಗಲಿದೆ. ಎಲೆಕ್ಟ್ರಾನಿಕ್ ಪಾಸ್ಬುಕ್- ಖಾತೆದಾರರು ಸುಲಭವಾಗಿ ಒಂದು ತಿಂಗಳ ವಹಿವಾಟು ತಿಳಿಯಬಹುದು. ಖಾತೆಯಲ್ಲಿರುವ ಮೊತ್ತದ ವಿಚಾರಣೆ, ಖಾತೆದಾರರ ಇಮೇಲ್, ಖಾತೆಯ ವಿವರಗಳನ್ನು ರವಾನಿಸಲಾಗುವುದು. ಶಾಖೆಗಳನ್ನು ಪತ್ತೆ ಹಚ್ಚುವ ಸೌಲಭ್ಯ, ಎಟಿಎಂ ಪತ್ತೆ ಹಚ್ಚುವ ಸೌಲಭ್ಯ, ಖಾತೆಗಳ ಸಾರಾಂಶ, ಚೆಕ್ ಯಾವ ಹಂತದಲ್ಲಿದೆ ಎಂಬ ಮಾಹಿತಿ, ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಯಲಿದೆ.
ಬ್ಯಾಂಕ್ ಖಾತೆಯಲ್ಲಿ ಮೊಬೈಲ್ ಫೋನ್ ಸಂಖ್ಯೆ ದಾಖಲಿಸಿದ ಖಾತೆದಾರರು ತಮ್ಮ ಸ್ಮಾರ್ಟ್ ಫೋನ್ಗೆ ಗೂಗಲ್ ಮತ್ತು ವಿಂಡೋಸ್ ಸ್ಟೋರ್ನಿಂದ ಕೆನರಾ ಇ- ಇನ್ಫೋಬುಕ್ ಅಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಕೆನರಾ ಬ್ಯಾಂಕ್ ಐಟಿ ವಿಭಾಗದವರೇ 15 ದಿನಗಳಲ್ಲಿ ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದಾರೆ.