ದ. ಏಷ್ಯಾದ ಮೊದಲ ಜೈನಶಾಸ್ತ್ರ ಅಧ್ಯಯನ ಕೇಂದ್ರ
ಡಿ.ಎನ್. ಮಹೇಂದ್ರ
ಮೈಸೂರು: ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಜೈನಶಾಸ್ತ್ರ ಅಧ್ಯಯನ ವಿಭಾಗ ತೆರೆದ ಕೀರ್ತಿ ಹೊಂದಿರುವ ಮೈಸೂರು ವಿವಿಯು ಇದೀಗ ಸುಸಜ್ಜಿತ ಪ್ರತ್ಯೇಕ ಕಟ್ಟಡ ನಿರ್ಮಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ.
ಜೈನಶಾಸ್ತ್ರ ಅಧ್ಯಯನ ಕೇಂದ್ರ ಹೊಂದಿರುವ ಭಾರತದ ಐದು ವಿವಿಗಳ ಪೈಕಿ ಎಲ್ಲಿಯೂ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇಲ್ಲ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಹೊಂದಿಕೊಂಡಂತಿದ್ದ ಖಾಲಿ ನಿವೇಶನದಲ್ಲಿ ಸುಮಾರು 1.40 ಕೋಟಿ ವೆಚ್ಚದಲ್ಲಿ ಜೈನಶಾಸ್ತ್ರ ಅಧ್ಯಯನ ವಿಭಾಗ ಕಟ್ಟಡ ನಿರ್ಮಿಸಲಾಗಿದ್ದು, ಫೆ.23ರ ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಟ್ಟಡ ಉದ್ಘಾಟಿಸುವರು.
1981ರಲ್ಲಿ ಸಾಹಿತಿ ಡಾ. ದೇಜಗೌ ಮೈಸೂರು ವಿವಿ ಕುಲಪತಿ ಆಗಿದ್ದ ವೇಳೆ ಜೈನಶಾಸ್ತ್ರ ಅಧ್ಯಯನದ ಅಗತ್ಯ ಮನಗಂಡು ದಕ್ಷಿಣ ಏಷ್ಯಾದಲ್ಲಿಯೆ ಮೊದಲ ಬಾರಿಗೆ ಈ ವಿಭಾಗ ಆರಂಭಿಸಿದರು. ಆ ಕಾಲಕ್ಕೆ ಮಹಾ ಪಂಡಿತರಾಗಿದ್ದ ಸೊಲ್ಲಾಪುರದ ಎ.ಎನ್. ಉಪಾಧ್ಯಾಯ ಅವರನ್ನು ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಪ್ರಾಕೃತ ಮತ್ತು ಪಾಳಿ ಭಾಷೆಯ ಅಧ್ಯಯನದ ಮೇಲೆ ನಿಂತಿರುವ ಜೈನಶಾಸ್ತ್ರ ಅಧ್ಯಯನ ಈಗ ಬಹು ವಿಸ್ತಾರಗೊಂಡಿದೆ.
ಜೈನಶಾಸ್ತ್ರದಲ್ಲಿ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ತರಗತಿ ಮಾತ್ರ ನಡೆಯುತ್ತಿತ್ತು. ಆದರೆ 1981ರಲ್ಲಿ ಸ್ನಾತಕೋತ್ತರ ತರಗತಿ ಆರಂಭಿಸಲಾಯಿತು. ಸುಮಾರು 42 ವರ್ಷಗಳಿಂದ ಮೂಲ ಸೌಲಭ್ಯವಿಲ್ಲದೆ ಬಳಲುತ್ತಿದ್ದ ಈ ವಿಭಾಗಕ್ಕೆ ಡಾ. ಪದ್ಮಾ ಶೇಖರ್ ಪರಿಶ್ರಮದಿಂದಾಗಿ ಸ್ವಂತ ಕಟ್ಟಡದ ಸುಯೋಗ ಬಂದಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ಮೈಸೂರು ವಿವಿಗೆ ನೀಡಿದ 100 ಕೋಟಿ ಅನುದಾನದ ಪೈಕಿ 50 ಲಕ್ಷವನ್ನು ಈ ಹಿಂದಿನ ಕುಲಪತಿ ಪ್ರೊ. ವಿ.ಜಿ. ತಳವಾರ್ ಈ ವಿಭಾಗಕ್ಕೆ ನೀಡಿದರು. ಇದರ ಜೊತೆಗೆ ಶ್ರವಣಬೆಳಗೊಳದ ಶ್ರೀಗಳು, ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ, ಬೆಂಗಳೂರಿನ ವಿಮುಕ್ತ ಜೈನ್ ಸೇರಿದಂತೆ ಹಲವರು ಧನ ಸಹಾಯ ಮಾಡಿದ್ದಾರೆ. ಸ್ವತಃ ಪದ್ಮಾ ಶೇಖರ್ ಅವರು ತಮಗೆ ದೊರೆತ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯ ನಗದನ್ನು ಸಹ ಈ ಕಟ್ಟಡಕ್ಕೆ ದಾನ ಮಾಡಿದರು.
ಈ ನೂತನ ಕಟ್ಟಡದಲ್ಲಿ ವಿಭಾಗದ ಮುಖ್ಯಸ್ಥರ ಕೊಠಡಿ, ಕಚೇರಿ, ಅಧ್ಯಾಪಕರ ಕೊಠಡಿ, ತರಗತಿಗಳು, ಗ್ರಂಥಾಲಯದ ಜೊತೆಗೆ ಕಂಪ್ಯೂಟರ್ ಕೊಠಡಿ ಮತ್ತು ಕಿರು ಸಭಾಂಗಣ ಇದೆ.
ಫೆ. 23ರ ಸಂಜೆ 5ಕ್ಕೆ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿದ್ವಾಂಸ ಪ್ರೊ. ಹಂಪ ನಾಗರಾಜಯ್ಯ, ಶಾಸಕ ವಾಸು ಅತಿಥಿಯಾಗುವರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ಜೈನಶಾಸ್ತ್ರ ವಿಭಾಗದ ಅಧ್ಯಕ್ಷೆ ಪ್ರೊ. ಪದ್ಮಾ ಶೇಖರ್ ಮತ್ತು ಕುಲಸಚಿವ ಪ್ರೊ.ಸಿ. ಬಸವರಾಜು ಭಾಗವಹಿಸುವರು.
ಜೈನಶಾಸ್ತ್ರ ಅಧ್ಯಯನ ವಿಭಾಗದ ಉದ್ಘಾಟನೆಯ ಜೊತೆಗೆ ಮುಖ್ಯ ಗ್ರಂಥಾಲಯದ ಅಂತರ್ಜಾಲ ಸೌಲಭ್ಯ ವಿಸ್ತರಣೆ, ಸ್ನಾತಕ ಗ್ರಂಥಾಲಯ ವಿಸ್ತರಣಾ ಕಟ್ಟಡ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ವಿಸ್ತರಣೆ, ಗ್ರಂಥಗಳ ಲೋಕಾರ್ಪಣೆ, ಮಹಾರಾಜ ಮತ್ತು ಯುವರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.