ದಲಿತ ಸಾಹಿತ್ಯ ಸಮ್ಮೇಳನ ಮುಂದಕ್ಕೆ
ಮೈಸೂರು: ಮಾರ್ಚ್ 1, 2ರಂದು ಮೈಸೂರಿನಲ್ಲಿ ಏರ್ಪಡಿಸಿದ್ದ 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ದಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಪುಟ್ಟನಂಜಯ್ಯ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ನಂತರ ಸಮ್ಮೇಳನ ಆಯೋಜಿಸಲಾಗುವುದು ಎಂದಿದ್ದಾರೆ.
ಕವಿ ಸಮ್ಮೇಳನಕ್ಕೆ ಕವನ ಆಹ್ವಾನ
ಮೈಸೂರು: ಹುಣಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯು ಕುವೆಂಪು ಸ್ಮರಣಾರ್ಥ ರಾಜ್ಯ ಮಟ್ಟದ ಚುಟುಕು ಕವಿಮೇಳವನ್ನು ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಿದೆ. ಮಾರ್ಚ್ನಲ್ಲಿ ನಡೆಯುವ ಸಮ್ಮೇಳನಕ್ಕೆ ಆಸಕ್ತ ಕವಿ- ಕವಯತ್ರಿಯರು ತಮ್ಮ ಆರು ಸಾಲಿನ ಮಿತಿಯೊಳಗಿನ ಐದು ಚುಟುಕು ಅಥವಾ ಹನಿಗವನಗಳನ್ನು ಕಳುಹಿಸಬಹುದು. ಕವನಗಳು ಸ್ವರಚಿತವಾಗಿರಬೇಕು. ಆಸಕ್ತರು ಫೆ.28ರೊಳಗೆ ಟಿ. ಲೋಕೇಶ್, ಅಧ್ಯಕ್ಷರು, ಸ್ಪಂದನ ಸಾಂಸ್ಕೃತಿಕ ಪರಿಷತ್, ಎಲ್ಐಜಿ 38, ಕೆಎಚ್ಬಿ 2, ಕಲ್ಕುಣಿಕೆ, ಹುಣಸೂರು ಪಟ್ಟಣ- 05 ಇಲ್ಲಿಗೆ ಕಳುಹಿಸಬೇಕು. 9880264678, 9980750100 ಸಂಪರ್ಕಿಸಿ.
ಬಂಜಾರ ನಿಗಮ ಅಭಿನಂದನೆ
ಮೈಸೂರು: ಈ ಸಾಲಿನ ಬಜೆಟ್ನಲ್ಲಿ ಕರ್ನಾಟಕ ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಉಪಕಚೇರಿಯನ್ನು ಮೈಸೂರಿಗೆ ಕೊಡುಗೆಯಾಗಿ ನೀಡಿರುವುದಕ್ಕೆ ಹಾಗೂ ಬಂಜಾರ ಸೇವಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರತ್ ಬಂಜಾರ ಸೇವಾಲಾಲ್ ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ರಮೇಶ್ ನಾಯ್ಕ ಅಭಿನಂದಿಸಿದ್ದಾರೆ.
ಪ್ರಗತಿ ಶಾಲೆಗೆ ನೋಟಿಸ್ ಜಾರಿ
ಸರಗೂರು: ಪಟ್ಟಣದ ಪ್ರಗತಿ ಶಾಲೆಯಲ್ಲಿ ಕಳೆದೆರಡು ದಿನ ಮಕ್ಕಳನ್ನು ಬಿಸಿಲಲ್ಲಿ ನಿಲ್ಲಿಸಿ ಮತ್ತು ಕೊಠಡಿಯಲ್ಲಿ ಕೂಡಿ ಹಾಕಿರುವುದು ಸರಿಯಲ್ಲ ಎಂದು ಬಿಇಒ ಉದಯಕುಮಾರ್ ಹೇಳಿದರು. ಗುರುವಾರ ಶಾಲೆಗೆ ಭೇಟಿ ನೀಡಿದ್ದ ಅವರು, ಆರ್ಟಿಇ ಪ್ರಕಾರ ಕಾನೂನಿನಲ್ಲಿ ಮಕ್ಕಳಿಗೆ ಯಾವುದೆ ಶಿಕ್ಷೆ ಕೊಡುವ ಅಧಿಕಾರ ಇಲ್ಲ. ಮಕ್ಕಳ ಹಕ್ಕುಗಳಿಗೆ ಧಕ್ಕೆ ಉಂಟಾಗುವಂತೆ ವರ್ತಿಸಿದ್ದು ಹಾಗೂ ಶಿಕ್ಷಣ ಇಲಾಖೆಯ ಗೌರವಕ್ಕೆ ಕುಂದು ಉಂಟು ಮಾಡಿದ್ದೀರಿ. ಆದ್ದರಿಂದ ಶಾಲಾ ಅನುಮತಿ ಪತ್ರ ಹಾಗೂ ಮಾನ್ಯತೆಯನ್ನು ಏಕೆ ರದ್ದು ಪಡಿಸಬಾರದು ಎಂಬ ಬಗ್ಗೆ ಚರ್ಚಿಸಿ ಡಿಡಿಪಿಐಗೆ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಸಿಆರ್ಪಿ ವೆಂಕಟರಾಮ್ ಅವರು ಪ್ರಗತಿ ಶಾಲೆಯ ಮುಖ್ಯ ಶಿಕ್ಷಕ ಸತೀಶ್ಗೆ ನೋಟಿಸ್ ನೀಡಿದರು.
ನಾಲ್ಕನೆ ದಿನಕ್ಕೆ ಪ್ರತಿಭಟನೆ
ಎಚ್.ಡಿ. ಕೋಟೆ: ಕಬಿನಿ ನಿರಾಶ್ರಿತರು ತಮಗೆ ಜಮೀನು ನೀಡುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ನಡೆಸುತ್ತಿದ್ದ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರಿಗೆ ಹಲವು ಸಂಘಟನೆಯವರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹದೇವಮ್ಮ, ಗೌರಮ್ಮ, ಶಕನಯ್ಯ ಅಸ್ವಸ್ಥರಾಗಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ
ಎಚ್.ಡಿ. ಕೋಟೆ: ತಾಲೂಕಿನ ಕಸಬಾ ಹೋಬಳಿ ವಿಶ್ವಕರ್ಮ ಕಾಲೋನಿಯಲ್ಲಿ ಪ್ರಬಾರ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಡಿಎಂಸಿ ಅಧ್ಯಕ್ಷ ವಿಶ್ವನಾಥ್ ಬಿಇಒ ಉದಯಕುಮಾರ್ ದೂರು ನೀಡಿದ್ದಾರೆ. ಕುಡಿದು ಶಾಲೆಗೆ ಬಂದು ಮಕ್ಕಳನ್ನು ಬೈಯುತ್ತಿರುವುದಾಗಿ ಬಿಇಒಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್ಸಿ ರಂಗಸ್ವಾಮಿ ಹಾಗು ಸಿಆರ್ಪಿ ಸೋಮಯ್ಯ ಶಾಲೆಗೆ ಭೇಟಿ ನೀಡಿದಾಗ ವೇಳೆ ಮುಗಿದಿದ್ದರಿಂದ ಶಿಕ್ಷಕ ಮನೆಗೆ ತೆರಳಿದ್ದು, ಶಿಕ್ಷಕನ ವೈದ್ಯಕೀಯ ತಪಾಸಣೆ ನಡೆಸಲು ಆಗಿಲ್ಲ.