ಬಡಮಕ್ಕಳ ಶಿಕ್ಷಣಕ್ಕೆ ಖಾಸಗಿ ಶಾಲೆಗಳು ಮುಂದಾಗಲಿ
ಟಿ. ನರಸೀಪುರ: ಬಡಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶಿಕ್ಷಣ ನೀಡುವುದು ಸಮಾಜಕ್ಕೆ ನೀಡುವ ಬಳುವಳಿ ಎಂಬ ಭಾವನೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಲ್ಲಿ ಮೂಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಿ. ಚಂದ್ರಶೇಖರ್ ಹೇಳಿದರು.
ಪಟ್ಟಣದ ಲಿಟಲ್ ಫ್ಲವರ್ ಕಾನ್ವೆಂಟ್ನಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೂ ಗುಣಮಟ್ಟದ ಶಿಕ್ಷಣ ನೀಡುವ ವಿಶಾಲ ಮನೋಭಾವ ಮೈಗೂಡಿಸಿಕೊಂಡು ನೂರರಲ್ಲಿ ಇಪ್ಪತ್ತೈದರಷ್ಟನ್ನು ಸೇವೆ ಎಂದು ಪರಿಗಣಿಸಿ ಪ್ರವೇಶಾತಿ ನೀಡಬೇಕು ಎಂದರು.
ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಜಿ. ದಿನೇಶ್ ಮಾತನಾಡಿದರು. ಶಿಕ್ಷಣ ಸಂಯೋಜಕ ಎಚ್.ಎಂ. ಶಂಕರ್, ವಕೀಲ ಭುವನೇಶ್ ಉಪನ್ಯಾಸ ನೀಡಿದರು. ಬಿಇಒ ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ ಶೆಣೈ, ಅಪರ ಸರ್ಕಾರಿ ವಕೀಲ ಎಂ.ಬಿ. ಶಂಕರ್, ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ನಾಗಭೂಷಣಮೂರ್ತಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವಣ್ಣ, ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೈರಾಜ್ ಇದ್ದರು.