ಮೈಸೂರು ಜೆಡಿಎಸ್ ಟಿಕೆಟ್ ಜಿಟಿಡಿ ಅಥವಾ ಮಹೇಶ್ಗೆ
ಬೆಂಗಳೂರು: ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿರುವ ಮೈಸೂರು ಲೋಕಸಭೆ ಕ್ಷೇತ್ರದಿಂದ ಶಾಸಕರಾಗಿರುವ ಜಿ.ಟಿ. ದೇವೇಗೌಡ ಅಥವಾ ಸಾ.ರಾ. ಮಹೇಶ್ ಅವರಲ್ಲಿ ಒಬ್ಬರಿಗೆ ಟಿಕೆಟ್ ಅಂತಿಮವಾಗಲಿದೆ.
ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಅವರು ಜೆಡಿಎಸ್ನಿಂದ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ, ಪ್ರಮೋದಾದೇವಿ ರಾಜಕಾರಣಕ್ಕೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಥವಾ ಕೃಷ್ಣರಾಜನಗರದ ಶಾಸಕ ಸಾ.ರಾ. ಮಹೇಶ್ ಅವರತ್ತ ಒಲವು ತೋರಿದ್ದಾರೆ. ಇವರಿಬ್ಬರಲ್ಲೇ ಒಬ್ಬರನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಶುಕ್ರವಾರವೇ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.