ಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ
ನಂಜನಗೂಡು: ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ಫೆ. 27ರ ಸಂಜೆ 6.30ರಿಂದ ಮರುದಿನ ಬೆಳಗಿನ ಜಾವ 5.30ರವರೆಗೆ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಧ್ಯರಾತ್ರಿ ವಿರಾಮದ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವವು ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 7ರಿಂದ ರಾತ್ರಿ 9.30ರವರೆಗೆ ಕೇರಳದ ನಾರಾಯಣ ವನಿತಾ ಸಿಂಗಾರಿಮೇಳಂದವರಿಂದ ಮಹಿಳಾ ಸಿಂಗಾರಿಮೇಳಂ ನೃತ್ಯ ವೈವಿಧ್ಯ ಹಾಗೂ ನೃತ್ಯ ರೂಪಕ ನಡೆಯಲಿದೆ.
ರಾತ್ರಿ 10ರಿಂದ ಮಧ್ಯರಾತ್ರಿ 2.30ರವರೆಗೆ ಮೈಸೂರಿನ ಸುನಾದ ವಾದ್ಯ ವೃಂದ ಭಕ್ತಿ ಹಾಗೂ ಜಾನಪದ ಗೀತೆಗಳನ್ನು ಹಾಡುವರು.
ಮಧ್ಯರಾತ್ರಿ 3ರಿಂದ ಬೆಳಗ್ಗೆ 5.30ರವರೆಗೆ ಹರಿಕಥಾ ಬಾಲೆ ಮೈಸೂರಿನ ಲಲಿತಾ ಉಳಿಯಾರ್ ಮತ್ತು ವೃಂದದಿಂದ ಶಿವ ಕಥಾ ಕಾಲಕ್ಷೇಪ ನಡೆಯಲಿದೆ.