'ಡೋಂಗಿ ಪರಿಸರವಾದಿಗಳ ಮುಷ್ಟಿಯಲ್ಲಿ ಅರಣ್ಯ ಕಾಯ್ದೆ'
ಎಚ್.ಡಿ. ಕೋಟೆ: ಅನುಸೂಚಿತ ಬುಡಕಟ್ಟುಗಳ ಅರಣ್ಯ ಕಾಯ್ದೆ ಡೋಂಗಿ ಪರಿಸರವಾದಿ ಮತ್ತು ಅರಣ್ಯ ಇಲಾಖೆಯ ಕಪಿಮುಷ್ಟಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಬಿ. ಕಾವೇರಿ ತಿಳಿಸಿದರು.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಘಟಕವು ಆಯೋಜಿಸಿದ್ದ ಆದಿವಾಸಿ ಅರಣ್ಯ ಕಾಯ್ದೆ ಅನುಷ್ಠಾನವು ದಿಕ್ಕು ತಪ್ಪುತ್ತಿರುವುದು ಹಾಗೂ ವಿವಿಗಳು ಆದಿವಾಸಿಗಳ ಮೇಲೆ ಸಂಶೋಧನೆ ನಡೆಸುವಾಗ ಹೇಗೆ ದಿಕ್ಕು ತಪ್ಪುತ್ತಿದ್ದಾರೆ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಕಮ್ಮಟದಲ್ಲಿ ಅವರು ಮಾತನಾಡಿದರು.
ಈ ಕಾಯ್ದೆಯ ಅನುಷ್ಠಾನದಲ್ಲಿ ಅನುಷ್ಠಾನ ಹಕ್ಕು ಸಮಿತಿ ಕುಂಟುನೆಪ ಹೇಳುತ್ತಿದೆ. ಈಗಾಗಲೆ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯು ಸುಮಾರು ಶೇ. 50ರಷ್ಟು ಅನುಷ್ಠಾನಗೊಂಡಿದೆ. ವೈಯಕ್ತಿಕ ಹಕ್ಕುಪತ್ರ ಮತ್ತು ಸಮುದಾಯಿಕ ಹಕ್ಕುಪತ್ರ ವಿತರಣೆ ಆಗಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಪ್ರಥಮ ಹೆಜ್ಜೆಯನ್ನೂ ಹಾಕಿಲ್ಲ.
ಆದ್ದರಿಂದ ಹಾಡಿ ಮಟ್ಟದಲ್ಲಿನ ಸಮಿತಿಯನ್ನು ಭದ್ರಪಡಿಸಬೇಕು. ಅವರಿಗೆ ಅಗತ್ಯ ಅರಿವಿನ ಕಾರ್ಯಾಗಾರ ಏರ್ಪಡಿಸಬೇಕಾದ ಅಗತ್ಯವಿದೆ ಎಂದರು.
ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಯ್ಯ ಮಾತನಾಡಿ, ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಆದಿವಾಸಿಗಳ ಪಾರಂಪರಿಕ ಸಂಸ್ಕೃತಿ ಬಿಂಬಿಸದೆ, ಅದರ ಬಗ್ಗೆ ಅಧ್ಯಯನ ಮಾಡದೆ ನಶಿಸಿ ಹೋಗುತ್ತಿದೆ. ಮತ ಬ್ಯಾಂಕಿನ ಸುಳ್ಳು ಜಾತಿ ಸೃಷ್ಟಿಸಿ ಪ.ಪಂಗಡಕ್ಕೆ ಸೇರಿಸುವ ಅಧ್ಯಯನ ನಡೆಯುತ್ತಿದೆ ಎಂದು ಆರೋಪಿಸಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಜಯರಾಂ ಅವರು ಇಲಾಖೆಯ ಕುರಿತು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಅಧ್ಯಕ್ಷ ಸಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಮುತ್ತ, ಚಾಮರಾಜನಗರ ಜಿಲ್ಲಾ ಮುಖಂಡರಾದ ಮಾದಯ್ಯ, ಮಂಜು, ಅರ್ಜುನ, ಮೈಸೂರು ಜಿಲ್ಲಾ ಮುಖಂಡರಾದ ಜಿ. ಸ್ವಾಮಿ, ಕುಮಾರ, ಸೋಮಶೇಖರ, ಕಾಳಯ್ಯ, ಜಯರಾಜು, ಸುಭಾಷಿಣಿ ಇದ್ದರು.