ನಿಲ್ಲದ ಮಹಿಳಾ ದೌರ್ಜನ್ಯ; ಡಾ. ಸಿಎನ್ಆರ್ ವಿಷಾದ
ಮೈಸೂರು: ಇಂದಿಗೂ ಸಮಾಜದಲ್ಲಿ ಮಹಿಳೆಯರ ಮೇಲಿನ ಆಕ್ರಮಣ ಹಾಗೂ ದೌರ್ಜನ್ಯ ಜೀವಂತವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ವಿಷಾದಿಸಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಶುಕ್ರವಾರ ಏರ್ಪಡಿಸಿದ್ದ ಕನ್ನಡ ಸ್ತ್ರೀವಾದಿ ಸಾಹಿತ್ಯ ಮತ್ತು ಚಳವಳಿ- ಸ್ಥಿತ್ಯಂತರಗಳು ಎಂಬ ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಪುರುಷ ಮತ್ತು ಸ್ತ್ರೀಯ ನಡುವಿನ ಸಂಬಂಧ ಬದಲಾವಣೆ ಆಗದೆ ಹಾಗೇ ಉಳಿದಿದೆ. ಮಹಿಳೆಯರ ಮೇಲಿನ ಆಕ್ರಮಣ ಮತ್ತು ದೌರ್ಜನ್ಯಗಳು ಆಯಾ ಜಾತಿ, ಧರ್ಮ, ಸಂಸ್ಕೃತಿ ಹಾಗೂ ಸಮುದಾಯಕ್ಕೆ ಸಂಬಂಧಿಸಿದಂತೆ ಭಿನ್ನ ಸ್ವರೂಪ ಪಡೆದಿವೆ. ಸ್ವರೂಪ ಯಾವುದೇ ಆಗಿದ್ದರೂ ಸ್ತ್ರೀಯರ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗಿಲ್ಲ ಎಂದು ಅವರು ವಿಷಾದಿಸಿದರು.
ಕನ್ನಡ ಸಾಹಿತ್ಯ ಚಳವಳಿಯಲ್ಲಿ ಮೂರು ವಿವಿಧ ತತ್ವಗಳಿವೆ. ಮೊದಲನೆಯದು ದೈಹಿಕ ಭಿನ್ನತೆ ಹಾಗೂ ಮಹಿಳೆಯರ ಕೋರಿಕೆ, ಎರಡನೆಯದು ನಾವು ಭಿನ್ನರಲ್ಲ ಹಾಗೂ ದೈಹಿಕ ಭಿನ್ನತೆ ಸರಿಯಲ್ಲ ಹಾಗೂ ಮೂರನೇಯದಾಗಿ ನಾವು ನಿಮಗಿಂತ ಮಾನಸಿಕವಾಗಿ ಭಿನ್ನರು ಹಾಗೂ ಅದೇ ನಮ್ಮ ಹೆಗ್ಗಳಿಕೆ ಎಂಬುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಡಾ.ಸಿ.ಎನ್. ರಾಮಚಂದ್ರನ್ ಹಾಗೂ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರು, ಇನ್ಸ್ಟ್ಯೂಷನ್ ಆಫ್ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಎಚ್.ಎನ್. ನಾಗರಾಜ್, ಟ್ರಸ್ಟಿ ಎಂ. ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಸ್ವಾಗತಿಸಿದರು. ಸಂಚಾಲಕರಾದ ಎಚ್.ಎನ್. ರಾಜೇ ಅರಸ್ ನಿರೂಪಿಸಿದರು. ಸಿ.ಕೆ. ಸೌಮ್ಯ ವಂದಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ಹೈದರಾಬಾದ್ ವಿವಿಯ ಪ್ರಾಧ್ಯಾಪಕ ಡಾ. ಶಿವರಾಂ ಪಡಿಕ್ಕಲ್, ಮೈಸೂರು ವಿವಿಯ ಪ್ರಾಧ್ಯಾಪಕಿ ಡಾ.ಎಂ. ಉಷಾ, ಶಿವಮೊಗ್ಗದ ಕುವೆಂಪು ವಿವಿಯ ಪ್ರಾಧ್ಯಾಪಕ ಡಾ.ಕೆ. ಕೇಶವಶರ್ಮ ಹಾಗೂ ಮಂಡ್ಯದ ಭಾರತೀ ಕಾಲೇಜಿನ ಪ್ರಾಧ್ಯಾಪಕ ಡಾ.ಮ. ರಾಮಕೃಷ್ಣ ಪ್ರಬಂಧ ಮಂಡಿಸಿದರು. ಮಂಡ್ಯದ ಮೈಸೂರು ವಿವಿಯ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಎಸ್.ಕೆ. ಚಂದ್ರಕಿರಣ್, ಮೈಸೂರು ವಿವಿಯ ಪ್ರಾಧ್ಯಾಪಕಿ ಡಾ.ಎಸ್.ಡಿ. ಶಶಿಕಲಾ, ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಎಚ್.ಪಿ. ಗೀತಾ ಹಾಗೂ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಪ್ರತಿಕ್ರಿಯೆ ನೀಡಿದರು. ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಹಾಗೂ ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾ ಬಾಯಿ ಅಧ್ಯಕ್ಷತೆ ವಹಿಸಿದ್ದರು.
ಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಬಿ.ಸಿ. ಮಂಜುಳಾ ನಿರ್ವಹಿಸಿದರು.