ವರದಕ್ಷಿಣೆ ಕಿರುಕುಳ; ಪತಿ ಬಂಧನ
ಮೈಸೂರು: ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಮೈಸೂರಿನ ಮಹಿಳಾ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎನ್.ಆರ್. ಮೊಹಲ್ಲಾ ನಿವಾಸಿ ಮೊಹಮ್ಮದ್ ಸಲೀಂ ಅಲ್ತಾಫ್ ಬಂಧಿತ ಆರೋಪಿ. ಇವರ ವಿರುದ್ಧ ಪತ್ನಿ ಸೈದಾ ಶಮಾ ಅಮರಿನ್ ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನವರಾದ ಶಮಾ ಅಮರಿನ್ ಅವರಿಗೆ 2012ರಲ್ಲಿ ಸಲೀಂ ಅಲ್ತಾಫ್‌ನೊಂದಿಗೆ ಮದುವೆಯಾಗಿತ್ತು.
ವರದಕ್ಷಿಣೆಯಾಗಿ 2 ಲಕ್ಷ, 150 ಗ್ರಾಂ. ಚಿನ್ನಾಭರಣ ಮತ್ತು 1 ಕಾರನ್ನು ನೀಡಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಮದುವೆ ನಂತರ ಚಿನ್ನಾಭರಣವನ್ನು ಅಡವಿರಿಸಿದ್ದಾರೆ. ಬಳಿಕ ಕಾರನ್ನು ಮಾರಾಟ ಮಾಡಿದ್ದಾರೆ. ಅಲ್ಲದೆ, 5 ಲಕ್ಷ ವರದಕ್ಷಿಣೆ ತರಬೇಕು, ಇಲ್ಲವಾದರೆ ಮನೆಗೆ ಬರದಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಉಪ ತಹಸೀಲ್ದಾರ್ ಆಗಿರುವ ಮಾವ ಅಲ್ತಾಫ್ ಪಾಷ, ಅತ್ತೆ ಅರ್ಷಿಯಾ ಮುನೀರಾ, ಮೈದುನಾ ಕಲೀಂ ಅಲ್ತಾಫ್, ನಾದಿನಿ ನಜಿಯಾ ನವಾಜ್, ನಾದಿನಿ ಪತಿ ಫಾರೂಕ್ ಹುಸೇನ್ ಕುಮ್ಮುಕ್ಕು ನೀಡಿದ್ದಾರೆ ಎಂದು ಶಮಾ ಅಮರಿನ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಅನ್ಸರ್ ಅಲಿ, ಎಸ್‌ಐ ಟಿ.ಎಸ್. ಲೋಲಾಕ್ಷಿ ಮತ್ತು ಸಿಬ್ಬಂದಿ ಸಲೀಂ ಅಲ್ತಾಫ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರೆಸಿದ್ದಾರೆ. ಉಳಿದವರು ತಪ್ಪಿಸಿಕೊಂಡಿದ್ದಾರೆ. ಉಳಿದವರ ವಿರುದ್ಧವೂ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಸೈದಾ ಶಮಾ ಅಮರೀನ್ ಮನವಿ ಮಾಡಿದ್ದಾರೆ.