ವರುಣದಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ
ಮೈಸೂರು: ವರುಣ ವಿಧಾನಸಭಾ ಕ್ಷೇತ್ರದ 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಗುದ್ದಲಿಪೂಜೆ ನೆರವೇರಿಸಿದರು.
ಮರಸೆ, ಮಾಕನಹುಂಡಿ, ಕೂಡನಹಳ್ಳಿ, ಹಡಜನ, ಮರೀಗೌಡನಹುಂಡಿ, ಕುಂಬ್ರಹಳ್ಳಿ ಮಠ, ದೇವಲಾಪುರ, ಆಯರಹಳ್ಳಿಗಳಲ್ಲಿ ಸುವರ್ಣಗ್ರಾಮ, ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ, ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ರಾಕೇಶ್, ವರುಣ ಕ್ಷೇತ್ರದ ಬಡವರಿಗೆ 5 ಸಾವಿರ ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಮಂಜೂರು ಮಾಡಲಿದ್ದಾರೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಗ್ರಾಮಸ್ಥರು ತಿಳಿಸಬೇಕು. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಸದಸ್ಯರಾದ ಜವರೇಗೌಡ, ಮಂಜುಳ ಪುಟ್ಟಸ್ವಾಮಿ, ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಎಪಿಎಂಸಿ ಉಪಾಧ್ಯಕ್ಷ ರಘು, ಸದಸ್ಯರಾದ ಪಿ. ಬೀರೇಗೌಡ, ರಮೇಶ್, ಶಿವಲಿಂಗೇಗೌಡ, ತಾಪಂ ಸದಸ್ಯೆ ಮಂಜುಳಾ ಮಂಜುನಾಥ್, ಬಳಗನಾಯಕ, ಮುಖಂಡರಾದ ಕೆ. ಹೆಬ್ಬಾಳೇಗೌಡ, ಮಹದೇವ್, ಪುಟ್ಟಸ್ವಾಮಿ, ವರುಣ ಮಹೇಶ್, ಮಣಿ, ರವಿ, ಮರೀಗೌಡ, ಶಿವಕುಮಾರ್, ಮಹದೇವ, ಗುತ್ತಿಗೆದಾರ ಹಡಜನ ಚಂದ್ರಶೇಖರ್, ಎಇಇ ಸೋಮಶೇಖರ್, ಎಇ ಈರೇಗೌಡ ಇದ್ದರು.
ನಾಳೆ ಪಲ್ಸ್ ಪೋಲಿಯೊ
ಮೈಸೂರು: ಮಕ್ಕಳಲ್ಲಿ ಹರಡುವ ಪೋಲಿಯೊ ರೋಗ ನಿರ್ಮೂಲನೆಗೆ 2ನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಫೆ. 23ರಂದು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪುಟ್ಟಸ್ವಾಮಿ ತಿಳಿಸಿದ್ದಾರೆ. ಜಿಲ್ಲಾದ್ಯಂತ 1588 ಕೇಂದ್ರಗಳನ್ನು ತೆರೆದು 3,13,161 ಮಕ್ಕಳಿಗೆ ಪೋಲಿಯೊ ಹನಿ ನೀಡುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ 6,352 ಜನ ನೀಡುವವರು ಹಾಗೂ 318 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಜಿಲ್ಲೆಯ ಎಲ್ಲ ಮಕ್ಕಳು ಪಲ್ಸ್ ಪೋಲಿಯೊ ಪಡೆಯಲು ಸಹಕರಿಸಬೇಕು ಎಂದು ಕೋರಿದ್ದಾರೆ.