ಅಪ್ರವರಂಭೆ ನಾಟಕೋತ್ಸವ ಮುಕ್ತಾಯ
ಮೈಸೂರು: ಅಪ್ರವರಂಭೆ ಸಾಂಸ್ಕೃತಿಕ ಸಂಸ್ಥೆಯು ನಗರದ ರಂಗಾಯಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ರಂಗಸಂಭ್ರಮ ನಾಟಕೋತ್ಸವ ಶನಿವಾರ ಮುಕ್ತಾಯವಾಯಿತು.
ಸಮಾರೋಪ ಸಮಾರಂಭದಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗುರುಪ್ರಸಾದ್, ಅಶ್ವತ್ಥ ಕದಂಬ, ಎಂ.ಎಂ. ಸುಗುಣ, ಡಾ. ತಿಪ್ಪೇಸ್ವಾಮಿ, ಸಿ.ಸಿ. ರಂಜನ್, ನಾಗರತ್ನ, ಡಾ.ನ. ರತ್ನ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ತಿಪ್ಪೇಸ್ವಾಮಿ, ನಮ್ಮ ಭಾಷೆ ಶ್ರೀಮಂತವಾಗಬೇಕಾದರೆ ಇಲ್ಲಿನ ನಾಟಕಗಳು ರೂಪಾಂತರವಾಗಬೇಕು. ಸಾಹಿತ್ಯವನ್ನು ಬೇರೆ ಭಾಷೆಗೆ ಅನುವಾದಿಸುವ ಕೆಲಸವಾಗಬೇಕು. ರಂಗಾಯಣದ ನಾಟಕಗಳು ಬೇರೆ ಕಡೆ ಪ್ರದರ್ಶನಗೊಂಡಿವೆ. ಜತೆಗೆ ಇಲ್ಲಿನ ಕಲೆಗಳು ಸಹ ಇತರೆ ದೇಶಗಳಿಗೂ ಪರಿಚಯವಾಗಿರುವುದು ರಂಗಭೂಮಿ ಬೆಳವಣಿಗೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ರಂಗಕರ್ಮಿ ಮಂಡ್ಯ ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ, ಡಾ. ಕೆ. ರಮೇಶ್ ಕಾಮತ್ ಇದ್ದರು. ನಂತರ ಡಾ. ನ. ರತ್ನ ನಿರ್ದೇಶನದ ಹುಲಿಯ ನೆರಳು ನಾಟಕ ಪ್ರದರ್ಶನಗೊಂಡಿತು.