ಕೆ.ಆರ್. ನಗರದಲ್ಲಿ ನಾಳೆ ಕೃಷಿ ಉತ್ಸವ
ಕೆ.ಆರ್. ನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ತಾಲೂಕು ಕೃಷಿ ಉತ್ಸವ ಸಮಿತಿಯ ಸಹಯೋಗದೊಂದಿಗೆ ಫೆ.25ರಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯಲಿರುವ ಕೃಷಿ ಉತ್ಸವಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ನೀಡಲಾದ ದವಸ, ಧಾನ್ಯ, ತರಕಾರಿ ಮತ್ತು ಇತರ ಹೊರೆ ಕಾಣಿಕೆಗಳನ್ನು ಸಮಿತಿಯ ಅಧ್ಯಕ್ಷ ಎಂ. ರಮೇಶ್ ಸ್ವೀಕರಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಅರ್ಕೇಶ್ವರ ದೇವಾಲಯದ ಬಳಿ ಹತ್ತಕ್ಕೂ ಹೆಚ್ಚು ವ್ಯಾನ್‌ಗಳಲ್ಲಿ ಆಗಮಿಸಿದ ಹೊರೆ ಕಾಣಿಕೆಯನ್ನು ಪೂಜೆ ಸಲ್ಲಿಸಿ ಬರ ಮಾಡಿಕೊಂಡ ಅಧ್ಯಕ್ಷರು ಕೃಷಿ ಉತ್ಸವಕ್ಕೆ ತಾಲೂಕಿನ ಜನತೆ ನೀಡುತ್ತಿರುವ ಸಹಕಾರಕ್ಕೆ ಸಮಿತಿಯು ಋಣಿಯಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂದಾಜು 25 ಸಾವಿರ ಮಂದಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಉತ್ಸವದಲ್ಲಿ 50ಕ್ಕೂ ಅಧಿಕ ವಿವಿಧ ಪ್ರದರ್ಶನ ಮಳಿಗೆಗಳನ್ನು ತೆರೆಯಲಿದ್ದು, ಕೃಷಿ, ಯಂತ್ರೋಪಕರಣ, ಸಾವಯವ ಕೃಷಿ ಪದ್ಧತಿ, ತೋಟಗಾರಿಕೆ, ವಿವಿಧ ತಳಿಯ ಬಿತ್ತನೆ ಬೀಜಗಳು ಸೇರಿದಂತೆ ಹತ್ತಾರು ರೀತಿಯ ವೈವಿಧ್ಯಮಯ ಕೃಷಿ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷರಾದ ಎಸ್. ಸಿದ್ದೇಗೌಡ, ಪ್ರಭಾಕರ ಜೈನ್, ಪ್ರಶಾಂತ್, ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿ ಸೋಮು, ಪ್ರಚಾರ ಸಮಿತಿ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಿ. ಅಶೋಕ್ ಇದ್ದರು.