ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಚಿಕ್ಕಮಾದು
ಎಚ್.ಡಿ. ಕೋಟೆ: ತಾಲೂಕಿನ ಪ್ರಮುಖ ರಸ್ತೆಗಳು ತೀರಾ ಹದಗೆಟ್ಟಿದ್ದು, ಈ ರಸ್ತೆಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಶಾಸಕ ಎಸ್. ಚಿಕ್ಕಮಾದು ಹೇಳಿದರು.
ತಾಲೂಕಿನ ಪುರದಕಟ್ಟೆಯಿಂದ ಹೂವಿಕೊಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾವು ಶಾಸಕನಾಗಿ ಆಯ್ಕೆಯಾದ ಮೇಲೆ 32 ಗ್ರಾಪಂಗಳ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಗ್ರಾಮಗಳಿಗೆ ಮತ್ತು ರಸ್ತೆಗಳ ಅಭಿವೃದ್ಧಿ ಆಗಬೇಕಾದ್ದನ್ನು ಪರಿಶೀಲಿಸಿದ್ದೇನೆ ಎಂದರು.
ಸಂಸದ ಆರ್. ಧ್ರುವನಾರಾಯಣ, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ತಾಲೂಕಿನ ಯಡಿಯಾಲದಿಂದ ಬಡಗಲಪುರದವರೆಗಿನ ರಸ್ತೆಗಳ ಅಭಿವೃದ್ಧಿಗೆ ಅನುಧಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಗುತ್ತಿಗೆದಾರರು ಗುಣ ಮಟ್ಟದಲ್ಲಿ ರಸ್ತೆ ನಿರ್ಮಿಸುವುದರ ಜತೆಗೆ ಮಳೆಗಾಲಕ್ಕೂ ಮುಂಚೆ ನಿರ್ಮಿಸುವಂತೆ ಸೂಚಿಸಿದರು. ಬಹಳ ವರ್ಷಗಳ ಹಿಂದೆ ಆಗಬೇಕಾಗಿದ್ದ ಸರಗೂರಿನಿಂದ ಯಡಿಯಾಲದವರೆಗಿನ 14 ಕಿ.ಮೀ. ರಸ್ತೆಯನ್ನು 8.5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ, ಸರಗೂರು ಬ್ಲಾಕ್ ಅಧ್ಯಕ್ಷ ರವಿ, ಮುಖಂಡರಾದ ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಬಸವರಾಜು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ದಾಸಪ್ಪ, ಅಶೋಕ್, ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜು, ಮಹೇಶ್ ರಾಜು, ಲಕ್ಷ್ಮಿನಾರಾಯಣ ಇದ್ದರು.