'ಸಮಾಜಕ್ಕೆ ಮಠಗಳ ಕೊಡುಗೆ ಅಪಾರ'
ರಾವಂದೂರು: ಸಮಾಜದ ಪರಿವರ್ತನೆಯಲ್ಲಿ ಮಠಗಳ ಪಾತ್ರ ಮಹತ್ತರವಾಗಿದೆ ಎಂದು ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಮುರುಘಾ ಮಠದಿಂದ ನಡೆದ ಬಸತತ್ವ ಸಮಾವೇಶ ಮತ್ತು ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಪೋಲಿಯೊ ಹನಿ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗಾಗಿ ಮನುಷ್ಯ ಪ್ರತಿದಿನ ಹೋರಾಟ ನಡೆಸುತ್ತಿದ್ದು ಈ ಹೋರಾಟದಲ್ಲಿ ಧಾರ್ಮಿಕ ಚಿಂತನೆಗಳು ನಮಗೆ ಮುದ ನೀಡುತ್ತವೆ. ಮಾನವನಿಗೆ ಸಂಸ್ಕಾರ ಅತ್ಯಗತ್ಯವಾಗಿದ್ದು ಸಂಸ್ಕಾರಕ್ಕೆ ಬದುಕನ್ನು ಅಲಂಕರಿಸುವ ಶಕ್ತಿ ಇದೆ. ಅಹಂಕಾರ ಎಂಬುದು ಮಾನವನ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಮನುಷ್ಯನು ಕೆಟ್ಟ ಭಾವನೆಗಳಿಂದ ಕೊಳೆಯದೆ ಒಳ್ಳೆಯ ಭಾವನೆಗಳಿಂದ ಹೊಳೆಯಬೇಕು ಸಂಸ್ಕಾರ ವಂತರಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಕೊಡುಗೆಯಾಗಿ ನೀಡಿದ. ವಚನಗಳ ತಳಹದಿಯ ಮೇಲೆ ಜೀವನ ರೂಪಿಸಿಕೊಂಡು ಮುನ್ನಡೆಯುವಂತೆ ತಿಳಿಸಿದರು.
ಶಿರಸಿಯ ರುದ್ರದೇವರ ಮಠದ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ರಾವಂದೂರಿನ ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಪಿಯು ಕಾಲೇಜಿನ ಉಪಪ್ರಾಂಶುಪಾಲ ನಾಗಶೆಟ್ಟಿ, ಉದ್ಯಮಿ ಆರ್.ಎಸ್. ಲಿಂಗಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
ಹೆಬ್ಬಾಳು ವಿರಕ್ತಮಠದ ಮಾಹಾಂತ ರುದ್ರೇಶ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವಮಾಚಿದೇವ ಸ್ವಾಮೀಜಿ, ಲಾಲನಹಳ್ಳಿಯ ತಾಯಿಜಯದೇವಿ ಲಿಗಾಡೆ, ಬೆಂಗಳೂರಿನ ಗಣಿತ ಶಾಸ್ತ್ರಜ್ಞ ಆರ್.ಡಿ. ಸತೀಶ್, ಮಧುಮೇಹತಜ್ಞ ಡಾ. ಚನ್ನಬಸಪ್ಪ, ಆರ್.ಎಸ್. ಚನ್ನಪ್ಪಶೆಟ್ಟಿ, ಆರ್.ಎಸ್. ಮಹೇಶ್, ಆರ್.ಎಸ್. ಶಶಿಧರ್ ಇದ್ದರು. ಕಲಾವಿದ ಮೋಹನ್ ಹಾಗೂ ರಾವಂದೂರು ಮೋಹನ್ ಮೇರವಾಡೆ ತಂಡದವರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.