ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೋಮಾರಿ ಭಾಗ್ಯ ಕಲ್ಪಿಸಿರುವ ಸರ್ಕಾರ; ಟೀಕೆ

Mainashree
Updated On : 23 Feb 2014, 10:41 am

ಮೈಸೂರು,: ವಿವಿಧ ಭಾಗ್ಯಗಳನ್ನು ಕಲ್ಪಿಸಿರುವ ರಾಜ್ಯ ಸರ್ಕಾರ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟ ಆರೋಪಿಸಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮುಂತಾದ ಯೋಜನೆಗಳ ಅಮಿಷಗಳನ್ನು ಒಡ್ಡಿದೆ. ವಿವಿಧ ಸಾಲಗಳನ್ನು ಮನ್ನಾ ಮಾಡುತ್ತಾ, ಕೋಟ್ಯಂತರ ರು. ಅನುತ್ಪಾದಕವಾಗಿ ಖರ್ಚು ಮಾಡುತ್ತಿರುವುದು ಶೋಚನೀಯ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಆರ್.ಎನ್. ಚಂಡೋಲಿಯಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
'ಕಾಯಕವೇ ಕೈಲಾಸ' ಎಂಬಂತೆ ದುಡಿದು ತಿನ್ನಬೇಕೆಂದು ಜನಕ್ಕೆ ತಿಳಿ ಹೇಳಬೇಕಾದದ್ದು ಸರ್ಕಾರದ ಕೆಲಸ. ಆದರೆ ಅನೇಕ ಭಾಗ್ಯಗಳನ್ನು ಕಲ್ಪಿಸಿ ಸ್ವಾವಲಂಬಿಯಾಗಬೇಕಾದ ಜನಕ್ಕೆ ಸೋಮಾರಿಗಳಾಗುವಂತೆ ಮಾಡಿದೆ. ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಪಡಿತರಿಗೆ 30 ಕೆ.ಜಿ. ಅಕ್ಕಿಯ ಬದಲು 15 ಕೆ.ಜಿ. ನಿಗದಿಪಡಿಸಲಿ. ಎಪಿಎಲ್ ಕಾರ್ಡ್‌ಗೆ 10 ಕೆ.ಜಿ. ಅಕ್ಕಿ ನೀಡಲಿ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 1.87 ಸಾವಿರ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಇದುವರೆಗೂ ಸಹ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಡ್ಡಾಯಗೊಳಿಸಬೇಕು. ಹಾಗೂ ವಿದ್ಯಾರ್ಥಿಗಳ ಮುಷ್ಕರದ ಹಕ್ಕು ಮೊಟಕುಗೊಳಿಸಬಾರದು ಎಂದು ಅವರು ಆಗ್ರಹಿಸಿದರು.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಸೆಳೆಯಲು ಅನೇಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜನರು ಈ ಬಗ್ಗೆ ಎಚ್ಚರ ವಹಿಸಬೇಕು. ಸಂಬಳ ಮತ್ತು ಪಿಂಚಣಿಗೆ 24, 857 ಕೋಟಿ, ಸಾಲ ಪಾವತಿಗೆ 11,611 ಕೋಟಿ ಹಾಗೂ ಬಡ್ಡಿಗೆ 7,500 ಕೋಟಿ ಖರ್ಚಾಗಲಿದೆ. ಈಗಾಗಲೇ 13,6078 ಕೋಟಿ ಬಜೆಟ್ ಮಂಡಿಸಿದ್ದು, 22,396 ಕೋಟಿ ಸಾಲ ಪಡೆಯಲು ಮುಂದಾಗಿರುವುದು ಸರ್ಕಾರ ದಿವಾಳಿ ಅಂಚಿನಲ್ಲಿರುವುದಕ್ಕೆ ನಿದರ್ಶನ ಎಂದು ಟೀಕಿಸಿದ ಅವರು, ಉತ್ತಮ ಸರ್ಕಾರದ ಆಯ್ಕೆಗೆ ಜನರು ಮುಂದಾಗಬೇಕು ಎಂದು ಅವರು ತಿಳಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎನ್. ಹನುಮಂತಪ್ಪ, ಉಪಾಧ್ಯಕ್ಷ ಆರ್. ಮುನ್ನಿರಾಜು, ಜಿಲ್ಲಾಧ್ಯಕ್ಷ ದೇವರಾಜು ಹಾಗೂ ಸಹ ಕಾರ್ಯದರ್ಶಿ ರಾಮದಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement