ಕಡ್ಡಾಯ ಮತದಾನದಿಂದ ರಾಜಕೀಯ ಸುಧಾರಣೆ
ಮೈಸೂರು: ದೇಶದಲ್ಲಿ ಕಡ್ಡಾಯ ಮತದಾನದ ವ್ಯವಸ್ಥೆ ಜಾರಿಗೆ ತರದಿದ್ದರೆ ರಾಜಕೀಯ ಸುಧಾರಣೆ ಅಸಾಧ್ಯ ಎಂದು ಮತದಾರರ ಜಾಗೃತಿ ಅಭಿಯಾನದ ಸಂಚಾಲಕ ವಸಂತಕುಮಾರ್ ಮೈಸೂರುಮಠ ಅಭಿಪ್ರಾಯಪಟ್ಟರು. ಮತದಾರರ ಜಾಗೃತಿ ಅಭಿಯಾನ ಹಾಗೂ ಚುನಾವಣೆ ಆಯೋಗದ ಸಹಯೋಗದೊಂದಿಗೆ ಸೋಮವಾರ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ಚುನಾವಣೆ 2014- ವ್ಯವಸ್ಥಿತ ರಾಜಕೀಯ ನಿರ್ಮಾಣದಲ್ಲಿ ಯುವಜನರ ಪಾತ್ರ ಕುರಿತ ಕಮ್ಮಟದಲ್ಲಿ ಅವರು ಮಾತನಾಡಿದರು. ಇತರರನ್ನು ಬದಲಾಯಿಸುವ ಮುನ್ನ ನಾವು ಬದಲಾಗಬೇಕು. ಮತದಾನ ಕೇಂದ್ರಕ್ಕೆ ಹೋಗಿ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಯ ಗುರುತಿಗೆ ಮತ ಗುಂಡಿ ಒತ್ತುವ ಮೂಲಕ ಸುಭದ್ರ ಸರ್ಕಾರ ರಚನೆಗೆ ನಾಂದಿ ಹಾಡಬೇಕು. ಇದಕ್ಕೆ ಕನಿಷ್ಠ ಶಿಕ್ಷಣದ ಅವಶ್ಯಕತೆ ಇದೆ ಎಂದರು.