ರಾಜಕೀಯ ಅಧಿಕಾರಕ್ಕಾಗಿ ಮಠಗಳ ನಿರ್ಮಾಣ
ಮೈಸೂರು: ರಾಜಕೀಯ ಅಧಿಕಾರ ಪಡೆಯುವ ಸಲುವಾಗಿ ಮಠಗಳು ನಿರ್ಮಾಣವಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಮೈಸೂರು ವಿವಿ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ನಡೆದ ಸಾಹಿತಿ ಪ್ರೊ. ಸುಧಾಕರ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಆಧ್ಯಾತ್ಮದಲ್ಲಿ ಆಸಕ್ತಿ ಇರಲಿ ಬಿಡಲಿ, ಮಠಗಳ ಮೂಲಕ ದೊಡ್ಡಜಾತಿಯು ಬಲಿಷ್ಠವಾಗಿರುವುದನ್ನು ಕಾಣಬಹುದು. ರಾಜಕೀಯ ಇಚ್ಛಾಶಕ್ತಿಗಾಗಿ ತಳವರ್ಗಗಳ ಸಮುದಾಯಗಳನ್ನು ಒಗ್ಗೂಡಿಸುವುದು ಅವಶ್ಯಕ. ಆದರೆ ಮಠಗಳನ್ನು ಕಟ್ಟುವ ಮೂಲಕ ರಾಜಕೀಯ ಅಧಿಕಾರ ಪಡೆಯುವಲ್ಲಿ ಮುಂದಾಗಿರುವುದನ್ನು ಇಲ್ಲವೆನ್ನುವಂತಿಲ್ಲ ಎಂದರು.
12ನೇ ಶತಮಾನಕ್ಕೂ ಪೂರ್ವದಲ್ಲಿ ಪಶುಪಾಲನೆ ಮಾಡುತ್ತಿದ್ದ ಶೈವ ಪರಂಪರೆಯಿಂದ ಕುರುಬ ಸಮುದಾಯಗಳು ಸಿಡಿದೆದ್ದು ಹೊರಬಂದು ಲಿಂಗ ಕಟ್ಟಿಕೊಂಡರು. ರೇವಣ್ಣ ಸಿದ್ದೇಶ್ವರರ ನೇತೃತ್ವದಲ್ಲಿ ಮಠ ಕಟ್ಟಿದರು. ಕನಕದಾಸರು ಹಾಗೂ ಅವರ ವಿಚಾರಗಳ ಕುರಿತು ಪ್ರೊ. ಸುಧಾಕರ ಅವರು ಆಳವಾಗಿ ಅಧ್ಯಯನ ಮಾಡಿದವರು ಎಂದು ತಿಳಿಸಿದರು.
ಗ್ರಾಮೀಣ ಅನುಭವ: ಗ್ರಾಮೀಣ ವ್ಯವಸಾಯ ಜೀವನದ ವೈಶಿಷ್ಟ್ಯತೆಗಳ ನೆಲೆಗಟ್ಟಿನಲ್ಲಿ ಕಥೆ ಕಟ್ಟಿದ ಕಥೆಗಾರ ಪ್ರೊ. ಸುಧಾಕರ ಅವರು, ವಿಶಿಷ್ಟ ಕನ್ನಡ ಶಬ್ದ, ನುಡಿಗಟ್ಟು ಹಾಗೂ ಗಾದೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದವರು. ಅವರೊಬ್ಬ ಅಪರೂಪದ ಅಧ್ಯಾಪಕರು ಹಾಗೂ ಸಂಶೋಧಕರು. ವಿದ್ಯಾರ್ಥಿ ಸಮೂಹವನ್ನು ಪ್ರೀತಿಯಿಂದ ಬೆಳೆಸಿ ಪ್ರೋತ್ಸಾಯಿಸಿದವರು ಎಂದು ಸ್ಮರಿಸಿದರು.
ಕಸಾಪ ಮಾಜಿ ಅಧ್ಯಕ್ಷ ಪ್ರೊ. ನಲ್ಲೂರು ಪ್ರಸಾದ್ ಮುಖ್ಯ ಅತಿಥಿಯಾಗಿದ್ದರು. ಮೈಸೂರು ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಜಿ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಂ. ನಂಜಯ್ಯ ಹೊಂಗನೂರು ನಿರೂಪಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ಪ್ರೊ. ಸುಧಾಕರ ಅವರ ಜೀವನ ಸಾಧನೆ ಎಂಬ ವಿಷಯ ಕುರಿತು ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ, ಕಥಾ ಸಾಹಿತ್ಯ ಕುರಿತು ಕವಯತ್ರಿ ಡಾ.ಎಚ್.ಎಲ್. ಪುಷ್ಪಾ ಹಾಗೂ ಜನಪದ ಸಂಗ್ರಹ ಸಂಪಾದನೆ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ.ಟಿ. ಜಯಲಕ್ಷ್ಮೀ ಸೀತಾಪುರ ಅವರು ಮಾತನಾಡಿದರು.
ಜನಪದ ವಿದ್ವಾಂಸ ಹಾಗೂ ಕಥೆಗಾರ ಪ್ರೊ. ಸುಧಾಕರ ಅವರ ಕುರಿತು ಕೇವಲ ವೇದಿಕೆಗಳಲ್ಲಿ ಹೊಗಳಿ ಭಾಷಣ ಮಾಡಿದರೆ ಸಾಲದು. ಅಥವಾ ಅವರ ಕುಟುಂಬಕ್ಕೆ ಸಾಂತ್ವಾನದ ಮಾತುಗಳಾಡಿದರೆ ಸಾಲದು. ಸಂಕಷ್ಟದಲ್ಲಿರುವ ಅವರ ಕುಟುಂಬಕ್ಕೆ ನೆರವಾಗುವಲ್ಲಿ ಇಂದು ನಿಜವಾದ ಕಾಳಜಿ ವಹಿಸಬೇಕು. ಅವರ ಕುಟುಂಬಕ್ಕೆ ಬೆಳಕು ನೀಡುವಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವಾಗಬೇಕು.
ಟಿ ಪ್ರೊ. ನಲ್ಲೂರು ಪ್ರಸಾದ್, ಕಸಾಪ ಮಾಜಿ ಅಧ್ಯಕ್ಷ