ವೇತನ ತಾರತಮ್ಯ ನಿವಾರಣೆಗೆ ಪಿಯು ಉಪನ್ಯಾಸಕರ ಒತ್ತಾಯ
ಮೈಸೂರು: ರಾಜ್ಯ ಸರ್ಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸದಿದ್ದರೆ ತರಗತಿ ಬಹಿಷ್ಕಾರ, ಮೌಲ್ಯಮಾಪನ ಬಹಿಷ್ಕಾರ ಹಾಕುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುಲೆ ಎಚ್ಚರಿಸಿದರು.
ಪಿಯು ಕಾಲೇಜುಗಳ ಉಪನ್ಯಾಸಕರ ವೇತನ ತಾರತಮ್ಯಕ್ಕೆ ಸಂಬಂಧಿಸಿದಂತೆ ಕುಮಾರ್ ನಾಯಕ್ ಅವರ ವರದಿಯನ್ನು ಕೂಡಲೆ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಈ ಸಂಬಂಧ ನಾವು ಮುಖ್ಯಮಂತ್ರಿಯವರಿಗೆ ಐದಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವೇತನ ತಾರತಮ್ಯ ನೀತಿ 1998ರಿಂದಲೂ ಇದೆ. ನಾವು ಈ ಸಂಬಂಧ ಹಲವು ಬಾರಿ ಪ್ರತಿಭಟಿಸಿದ್ದೇವೆ. ಮೌಲ್ಯಮಾಪನ ಬಹಿಷ್ಕರಿಸಿದ್ದೇವೆ. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೆ ಮೌಲ್ಯಮಾಪನಕ್ಕೆ ಹಾಜರಾಗಿದ್ದೇವೆ. ಎಲ್ಲ ಸರ್ಕಾರಕ್ಕೆ ಕಾಲಾವಕಾಶ ನೀಡಿದಂತೆ ಸಿದ್ದರಾಮಯ್ಯ ಅವರ ಸರ್ಕಾರಕ್ಕೂ 9 ತಿಂಗಳ ಕಾಲಾವಕಾಶ ನೀಡಲಾಯಿತು. ಆದರೂ ಬಜೆಟ್ನಲ್ಲಿ ನಮ್ಮ ಸಮಸ್ಯೆ ಪರಿಹಾರದ ಘೋಷಣೆ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರ ಪಿಯು ಉಪನ್ಯಾಸಕರಿಗೆ ಬಿ.ಇಡಿ ಶಿಕ್ಷಣ ಪಡೆಯಲು ವೇತನ ಸಹಿತ ಕಾಲಾವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ 1998ರಿಂದ ನಮ್ಮ ಮೂಲ ವೇತನದಲ್ಲಿ ಸಮಸ್ಯೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಆದ್ದರಿಂದ ಕೂಡಲೆ ರಾಜ್ಯ ಸರ್ಕಾರ ನಮ್ಮ ಕಡೆ ಗಮನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಂಗೇಗೌಡ, ಉಪಾಧ್ಯಕ್ಷ ಬಿ.ಸಿ. ಯೋಗಾನಂದ, ಕಾರ್ಯಾಧ್ಯಕ್ಷ ಎಸ್.ಆರ್. ವೆಂಕಟೇಶ್, ಜಿಲ್ಲಾಧ್ಯಕ್ಷ ಎಚ್.ಜಿ. ಸುರೇಶ್ಬಾಬು ಇದ್ದರು.