ಶಾಸಕ ಸಾ.ರಾ.ಮಹೇಶ್ ವರ್ತನೆಗೆ ಖಂಡನೆ
ಕೆ.ಆರ್. ನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ಪ. ಜಾತಿಯ ವಿದ್ಯಾರ್ಥಿನಿಲಯದ ಶಂಕಸ್ಥಾಪನಾ ಆಹ್ವಾನ ಪತ್ರಿಕೆಯಲ್ಲಿ ಸಚಿವ ಎಚ್. ಆಂಜನೇಯ ಅವರ ಹೆಸರನ್ನು ಮುದ್ರಿಸದಿರುವುದನ್ನು ಪ್ರಶ್ನಿಸಿದೆವು. ಈ ವೇಳೆ ಶಾಸಕ ಸಾ.ರಾ. ಮಹೇಶ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ. ಲೋಕೇಶ್ ಖಂಡಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಬಿಜೆಪಿ ಸರ್ಕಾರ ಹಣ ನೀಡಿದ್ದು ಎಂದು ಉಡಾಫೆ ಉತ್ತರ ನೀಡಿದ್ದಾರೆ. ಸಚಿವರ ಹೆಸರು ಮುದ್ರಿಸದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಘದ ವತಿಯಿಂದ ದೂರು ನೀಡುತ್ತಿರುವ ವೇಳೆ ಮಧ್ಯ ಪ್ರವೇಶಿಸಿದ ಶಾಸಕರು, ಹಿಂದಿನ ಸಮಾಜ ಕಲ್ಯಾಣ ಸಚಿವರು ಹಣ ನೀಡಿದ್ದು, ಹೀಗಾಗಿ ಹಾಲಿ ಸಚಿವರನ್ನು ಆಹ್ವಾನಿಸುವ ಅಗತ್ಯ ಇಲ್ಲ ಎಂದರು. ಅಲ್ಲದೆ, ಸಂಘದವರನ್ನು ಸ್ಥಳದಿಂದ ತೆರವುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಮಧ್ಯೆ ಜೆಡಿಎಸ್ ಕಾರ್ಯಕರ್ತರ ದೂರು ಹೋದ ನಮ್ಮ ಮೇಲೆ ಹಲ್ಲೆಗೆ ಮುಂದಾಗಿ ದೌರ್ಜನ್ಯ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದ ಅವರು, ಬಿಜೆಪಿ ಸರ್ಕಾರ 1 ಕೋಟಿ, ಕಾಂಗ್ರೆಸ್ ಸರ್ಕಾರ 2.58 ಕೋಟಿ ಬಿಡುಗಡೆ ಮಾಡಿದೆ. ಹಣ ಬಿಡುಗಡೆಗೊಂಡಿರುವುದು ಶಾಸಕರಾಗಿರುವ ಇವರಿಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
ಅಂದು ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನಾ ಆಹ್ವಾನ ಪತ್ರಿಕೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೆಸರನ್ನು ಮುದ್ರಿಸಿ, ಆರೋಗ್ಯ ಇಲಾಖೆಯವರು ಶಿಷ್ಟಾಚಾರ ಪಾಲಿಸಿದ್ದಾರೆ. ಆದರೆ ಅದೇ ದಿನ ನಡೆದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ, ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಆಂಜನೇಯ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ದೂರಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುತ್ತಿರುವ ವಿದ್ಯಾರ್ಥಿನಿಲಯ ಕಟ್ಟಡವನ್ನು ಕೆಡವಿ ನೂತನವಾಗಿ ನಿರ್ಮಾಣ ಮಾಡಿದ ನಂತರ, ವಿದ್ಯಾರ್ಥಿನಿಲಯ ಸ್ಥಾಪನೆಗೊಳ್ಳಲು ಕಾರಣರಾದ ದಿ.ಬಿ. ರಾಚಯ್ಯ ಅವರ ಪುತ್ಥಳಿಯನ್ನು ನಿಲಯದ ಆವರಣದಲ್ಲಿ ಪ್ರತಿಷ್ಠಾಪಿಸಿಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶ್ರೀರಾಮ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಡಿ. ಕಾಳಯ್ಯ, ಎಸ್.ಎಂ. ನಾಗರಾಜು, ರವಿಕುಮಾರ್, ಮಾದಯ್ಯ ಇದ್ದರು.