ಅಲ್ಪಸಂಖ್ಯಾತರ, ಹಿಂದುಳಿದವರ ಅಭಿವೃದ್ಧಿಗೆ ಅನುದಾನ: ಸಂಸದ ವಿಶ್ವನಾಥ್
ರಾವಂದೂರು: ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಂಸದರ ಅನುದಾನವನ್ನು ಸಮಾನಾಗಿ ಹಂಚಿರುವುದಾಗಿ ಸಂಸದ ಎಚ್. ವಿಶ್ವನಾಥ್ ಹೇಳಿದರು.
ಪಿರಿಯಾಪಟ್ಟಣದ ತಾಲೂಕಿನ ಎಸ್.ಕೊಪ್ಪಲು ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಸಮುದಾಯ ಭವನದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಮಡಿವಾಳ ಜನಾಂಗದ ಅಭಿವೃದ್ಧಿಗಾಗಿ ರಾವಂದೂರು, ಕೋಮಲಾಪುರ, ಪಿರಿಯಾಪಟ್ಟಣ ಗ್ರಾಮಗಳಲ್ಲಿ 17 ಲಕ್ಷ ಕೊಡುಗೆಯಾಗಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಸೂಕ್ತ ಸ್ಥಳದಲ್ಲಿ ಹೈಟೆಕ್ ದೋಬಿಗಾಟ್ ನಿರ್ಮಿಸುವುದಾಗಿ ಅವರು ಭರವಸೆ ನೀಡಿದರು.
ಮಡಿವಾಳ ಗುರುಮಠದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರ ಅನುಯಾಯಿಯಾಗಿ ಬೆಳೆದ ಮಡಿವಾಳ ಮಾಚಿದೇವರು ಬಸವಣ್ಣನವರ ಉತ್ತಮ ಶಿಷ್ಯರಾಗಿದ್ದು, ಅವರ ಆದರ್ಶ ತತ್ವಗಳನ್ನು ಅನುಸರಿಸಿ ಉತ್ತಮ ಜೀವನ ನಡೆಸಬೇಕು. ಮಕ್ಕಳಿಗೆ ಹೆಚ್ಚಿನ ಮಟ್ಟದ ವಿದ್ಯಾಭ್ಯಾಸವನ್ನು ನೀಡಬೇಕು ಎಂದರು. ಮಾಜಿ ಶಾಸಕ ಎಚ್.ಸಿ. ಬಸವರಾಜು, ಕಾಂಗ್ರೆಸ್ ಮುಖಂಡರಾದ ಎಚ್.ಎ. ವೆಂಕಟೇಶ್, ಬಿ.ಜೆ. ವಿಜಯಕುಮಾರ್, ಕುಮಾರ ವಿಜಯ, ಎಸ್.ವಿ.ಎಸ್. ಸುರೇಶ್, ಮಡಿವಾಳ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಮಾದೇಶ್, ರಾಮಚಂದ್ರಶೆಟ್ಟಿ, ಶಿವಸ್ವಾಮಿ, ದಶರಥಶೆಟ್ಟಿ ಇದ್ದರು.
ಕಬಿನಿ ಬಲದಂಡೆ ನಾಲೆಗೆ ನೀರು ಹರಿಸಿ
ನಂಜನಗೂಡು: ರೈತರ ಜೀವನಾಡಿಯಾಗಿರುವ ಕಬಿನಿ ಜಲಾಶಯದಿಂದ ಬೆಳೆ, ಜನ-ಜಾನುವಾರು ಸಂರಕ್ಷಣೆ ಹಾಗೂ ಬದುಕಿಗಾಗಿ ಬಲದಂಡೆ ನಾಲೆಗೆ ತಕ್ಷಣವೇ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಾವಲು ಪಡೆ ಪ್ರತಿಭಟಿಸಿತು. ಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಮೆರವಣಿಗೆ ಮೂಲಕ ಘೋಷಣೆ ಕೂಗಿ, ಕಬಿನಿ ನೀರಾವರಿ ಕಚೇರಿ ಮುಂಭಾಗ ಕಾವಲು ಪಡೆ ಮುಖಂಡರು ಪ್ರತಿಭಟನೆ ನಡೆಸಿ, ನೀರಾವರಿ ಇಲಾಖೆಯ ಎಇಇ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಡಿ.ಆರ್. ಧರ್ಮೇಂದ್ರ, ಅಧ್ಯಕ್ಷ ಶ್ರೇಯಸ್ಗೌಡ, ಕೃಷ್ಣ, ರಾಕೇಶ್, ಉಮೇಶ್, ನಾರಾಯಣ, ರಘು, ಬಾಲು, ಸತ್ಯ ಇದ್ದರು.