ಆದಿವಾಸಿಗಳ ನೇತೃತ್ವದಲ್ಲಿ ಚಳವಳಿ ರೂಪಿಸಬೇಕು'
ಹುಣಸೂರು: ರೈತ, ದಲಿತ ಚಳವಳಿಗಳು ಜಾತಿ ಸಂಘಟನೆ ಆಗಿರುವುದರಿಂದ ಸಾಂಸ್ಕೃತಿಕವಾಗಿ ಮೇರುಪರ್ವತ ಎನಿಸಿದ ಆದಿವಾಸಿಗಳನ್ನೇ ಮೇಟಿಯಾಗಿಸಿ ಹೊಸ ಚಳವಳಿಗೆ ರೂಪ ಕೊಡಬೇಕಿದೆ ಎಂದು ಚಿಂತಕ ಪ್ರೊ. ಎಚ್. ಗೋವಿಂದಯ್ಯ ಹೇಳಿದರು.
ಪಟ್ಟಣದ ಡೀಡ್ ಸಂಸ್ಥೆಯಲ್ಲಿ ಹಂಪಿ ಕನ್ನಡ ವಿವಿ ಆಯೋಜಿಸಿದ್ದ ಐದು ದಿನಗಳ ಬುಡಕಟ್ಟು ಕೃಷಿ ಮತ್ತು ಪಾರಂಪರಿಕ ಜ್ಞಾನ ಕುರಿತ ಕಮ್ಮಟದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ರೈತ- ದಲಿತ ಚಳುವಳಿಗಳು ಜಾತಿ ಸಂಘಟನೆ ಆಗಿದೆ. ಆದಿವಾಸಿಗಳು ಸುಳ್ಳು ಹೇಳುವವರಲ್ಲ. ಯಾವುದರ ಮಾಲೀಕತ್ವ ಬೇಕೆನ್ನುವವರಲ್ಲ. ಕೊಲೆ, ಸುಲಿಗೆ, ಅತ್ಯಾಚಾರ ಮಾಡುವವರಲ್ಲ. ಸರಳ ಜೀವನ ನಡೆಸಿ ಕಾಡು ಪ್ರಾಣಿಗಳನ್ನು ದೇವರಂತೆ ಪೂಜಿಸುವ ಸಾಂಸ್ಕೃತಿಕವಾಗಿ ಮೇರು ಪರ್ವತ ಎನಿಸಿರುವ ಆದಿವಾಸಿಗಳನ್ನೆ ಮೇಟಿಯನ್ನಾಗಿಸಿಕೊಂಡು ಹೊಸ ಚಳವಳಿಗೆ ಹೊಸ ರೂಪ ಕೊಡಬೇಕಿದೆ ಎಂದರು.
ಆದಿವಾಸಿಗಳ ಕುರಿತ ಬದುಕು, ಸಾಂಸ್ಕೃತಿಕ ಸಿದ್ಧಾಂತ, ಜೀವನ ಕಾಡು ಪ್ರೀತಿ ಬಗ್ಗೆ ಎಲ್ಲೂ ಚರ್ಚೆ ನಡೆದಿಲ್ಲ. ಆದ್ದರಿಂದ ಬುಡಕಟ್ಟು ಜನರ ಅಧ್ಯಯನಕ್ಕಾಗಿ ಆದಿವಾಸಿ ವಿವಿ ಸ್ಥಾಪಿಸಬೇಕು. ಅವರ ಜೀವಂತ ಕತೆಗಳು ದಾಖಲಾಗಬೇಕು. ಯಾವ ಮರ್ಮವನ್ನೂ ಅರಿಯದ ಕೇವಲ ಕಾಡು- ಮೇಡು ಪ್ರಾಣಿಗಳ ಬಗ್ಗೆ ಅಪಾರ ಜ್ಞಾನವುಳ್ಳ ಇವರನ್ನು ಆದಿವಾಸಿ ದೇವರೆಂದು ಕರೆಯಬಹುದು. ಕಾಡು ರಕ್ಷಣೆಗೆ ಡಿಸಿಎಫ್, ರೇಂಜರ್, ಗಾರ್ಡ್ ನೇಮಿಸುವ ಬದಲು ಆದಿವಾಸಿಗಳನ್ನೆ ನೇಮಿಸಿದರೆ ಕಾಡು ಉಳಿಯಲಿದೆ ಎಂದರು.
ಹಂಪಿ ವಿವಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಎಚ್.ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಡೀಡ್ ಸಂಸ್ಥೆಯ ಶ್ರೀಕಾಂತ್ ಮಾತನಾಡಿದರು.
ನಿರ್ಣಯಗಳು: ಕಾಡಿನ ಉತ್ಪನ್ನ ಆದಿವಾಸಿಗಳಿಗೆ ಸಲ್ಲಬೇಕು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾರಾಟ ಕೇಂದ್ರ ತೆರೆಯಬೇಕು. ಆದಿವಾಸಿಗಳ ಪಾರಂಪರಿಕ ಪಶುತಳಿ ರಕ್ಷಿಸಬೇಕು. ಬುಡಕಟ್ಟು ಜಾನಪದ, ಪ್ರಾಂಜಲ ಜ್ಞಾನ ಮತ್ತು ಜೀವನ ವಿಧಾನ ಕಣ್ಮರೆ ಆಗುತ್ತಿರುವುದರಿಂದ ಪರಂಪಾರಿಕ ನೆಲೆಗಳಲ್ಲಿ ಬದುಕಲು ಬಿಡಬೇಕು. 2006ರ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಜಾರಿಯಾಗಬೇಕು. ಆದಿವಾಸಿ ಸಾಂಪ್ರದಾಯಿಕ ಕೃಷಿ ಪದ್ಧತಿ ಪೋಷಿಸಬೇಕು. ಆದಿವಾಸಿಗಳ ಪರಿಸರ ಜ್ಞಾನವನ್ನು ದಾಖಲಿಸಬೇಕು. ಆದಿವಾಸಿ ವೈದ್ಯರನ್ನು ಗುರುತಿಸಬೇಕು, ಆದಿವಾಸಿಗಳನ್ನು ಒಕ್ಕಲ್ಲೆಬ್ಬಿಸಬಾರದು ಎಂಬ ನಿರ್ಣಯ ಕೈಗೊಳ್ಳಲಾಯಿತು.