ಒಳಚರಂಡಿ ವ್ಯವಸ್ಥೆಗೆ 42.50 ಕೋಟಿ
ಮೈಸೂರು: ನಗರಪಾಲಿಕೆಗೆ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಈ ಕೆಳಕಂಡ ಉದ್ದೇಶಗಳಿಗಾಗಿ ವಿನಿಯೋಗಿಸಲು ಯೋಜಿಸಿದೆ.
ನಗರದಲ್ಲಿ ಸುಸಜ್ಜಿತ ಸಮರ್ಪಕ ಹಾಗೂ ಹೆಚ್ಚಿನ ಸಾಮರ್ಥ್ಯದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮತ್ತು ಹಾಲಿ ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು 2014-15ನೇ ಸಾಲಿನಲ್ಲಿ ಪಾಲಿಕೆ ನಿಧಿ ಮತ್ತು ಅನುದಾನಗಳಿಂದ ಒಟ್ಟಾರೆ 42.50 ಕೋಟಿ ಕಾಯ್ದಿರಿಸಲಾಗಿದೆ.
2 ಹೆಚ್ಚುವರಿ ಘನತ್ಯಾಜ ಸಂಸ್ಕರಣ ಘಟಕ: ನಗರದಲ್ಲಿ ಪ್ರತಿನಿತ್ಯ ಸುಮಾರು 402 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 160 ಟನ್ ತ್ಯಾಜ್ಯವನ್ನು ವಿದ್ಯಾರಣ್ಯಪುರಂನಲ್ಲಿರುವ ಕೇಂದ್ರೀಕೃತ ಗೊಬ್ಬರ ಸಂಸ್ಕರಣ ಘಟಕದಲ್ಲಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಉಳಿದಂತೆ 40 ಟನ್ ತ್ಯಾಜ್ಯವನ್ನು ಪಾಲಿಕೆಯ ವಿಕೇಂದ್ರಿಕೃತ ಶೂನ್ಯ ಕಸ ನಿರ್ವಹಣೆ ಘಟಕದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇನ್ನುಳಿದ 200 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ವಿಲೇವಾರಿ ಮಾಡಲು ಹಾಗೂ ಮುಂದೆ ಉತ್ಪತ್ತಿಯಾಗುವ ಹೆಚ್ಚುವರಿ ಹೊರೆಯನ್ನು ತಗ್ಗಿಸಲು ಕೆಸರೆ ಮತ್ತು ರಾಯನಕೆರೆಗಳಲ್ಲಿ ತಲಾ 200 ಟನ್ ಸಾಮರ್ಥ್ಯದ ಕಾಂಪೋಸ್ಟ್ ತಯಾರಿಕಾ ಘಟಕಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಘಟಕಗಳ ನಿರ್ಮಾಣಕ್ಕಾಗಿ 5 ಕೋಟಿ ಕಾಯ್ದಿರಿಸಲಾಗಿದೆ.
ಶೂನ್ಯ ಘನತ್ಯಾಜ್ಯ ನಿರ್ವಹಣೆ: ಪಾಲಿಕೆಯ 9 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನರ್ಮ್ ಯೋಜನೆಯಡಿ ಸ್ಥಾಪಿಸಲಾಗಿದೆ. ಈಗಾಗಲೇ 5 ಘಟಕಗಳ ಕಾರ್ಯಾರಂಭ ಆಗಿದೆ. ವಲಯ ಕಚೇರಿ- 8ರ ಘಟಕವನ್ನು ಪಾಲಿಕೆಯಿಂದ ಯಾವುದೇ ಹಣಕಾಸು ಸಹಾಯವಿಲ್ಲದೆ ನಿರ್ವಹಣೆ ಮಾಡಲು ಪೇಜ್ ಟ್ರಸ್ಟ್ ಮುಂದೆ ಬಂದಿದೆ. ಉಳಿದ ಘಟಕಗಳ ಕಾರ್ಯಾರಂಭಕ್ಕೆ ನೋಂದಾಯಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇವುಗಳ ನಿರ್ವಹಣೆಗಾಗಿ 50 ಲಕ್ಷ ಕಾಯ್ದಿರಿಸಲಾಗಿದೆ.
ಅಲ್ಲದೆ, ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಲು ಎಸ್ಎಫ್ಸಿ ಮುಕ್ತನಿಧಿ ಅನುದಾನದಡಿಯಲ್ಲಿ 10 ಟನ್ ಸಾಮರ್ಥ್ಯದ ಶ್ರೆಡ್ಡರ್ಗಳನ್ನು ಘಟಕಗಳಲ್ಲಿ ಅಳವಡಿಸಲು 10 ಕೋಟಿ ಕಾಯ್ದಿರಿಸಲಾಗಿದೆ.
ರಸ್ತೆಬದಿ ವ್ಯಾಪಾರಿಗಳಿಗೆ: ನಗರದಲ್ಲಿ 7 ಸಾವಿರ ಮಂದಿ ರಸ್ತೆಬದಿ ವ್ಯಾಪಾರಿಗಳು ಇರುವುದು ಕಂಡು ಬಂದಿದೆ. ಆಹಾರ ಮಾರಾಟ ಮಾಡುವ ರಸ್ತೆಬದಿ ವ್ಯಾಪಾರಿಗಳಿಗೆ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಇವರಿಗಾಗಿ ಪ್ರತ್ಯೇಕ ಆಹಾರ ಮಾರಾಟ ವಲಯಗಳನ್ನು ಗುರುತಿಸಿ, ಕಾಂಕ್ರೀಟ್ ಫ್ಲಾಟ್ಫಾರಂ, ನೀರು ಸರಬರಾಜು, ಚರಂಡಿ, ವಿದ್ಯುತ್ ಹಾಗೂ ಸುರಕ್ಷಿತ ವ್ಯವಸ್ಥೆಯುಳ್ಳ ತಳ್ಳುವ ಗಾಡಿಗಳನ್ನು ಸಬ್ಸಿಡಿ ದರದಲ್ಲಿ ನೀಡುವುದು ಅಗತ್ಯವಾಗಿದೆ. ಜೊತೆಗೆ ಗುರುತಿನ ಚೀಟಿ, ತರಬೇತಿ, ತಳ್ಳುವ ಗಾಡಿಗಳ ಉನ್ನತೀಕರಣ, ಆರೋಗ್ಯ ವಿಮೆ, ಜೀವವಿಮೆ ಇತ್ಯಾದಿ ವ್ಯವಸ್ಥೆ ಪೂರೈಸಲು 2 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
2 ಈಜುಕೊಳ ನಿರ್ಮಾಣ: ಎನ್.ಆರ್. ಕ್ಷೇತ್ರದ ಉದಯಗಿರಿ ಸೈಯದ್ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಪಾಲಿಕೆ ನಿಧಿಯಿಂದ 5 ಕೋಟಿ ಹಾಗೂ ಕೆ.ಆರ್. ಕ್ಷೇತ್ರದ ಸುಬ್ಬರಾಯನಕೆರೆಯಲ್ಲಿ 2014-15ನೇ ಸಾಲಿಗೆ ಬಿಡುಗಡೆಯಾಗುವ ಎಸ್ಎಫ್ಸಿ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿದೆ.
ಶ್ರೀಕಂಠದತ್ತ ಹೆಸರು: ಜೆ.ಪಿ. ನಗರದಲ್ಲಿರುವ ಪುಟ್ಟರಾಜ ಗವಾಯಿಗಳ ಕ್ರೀಡಾಂಗಣಕ್ಕೆ ಪಾಲಿಕೆ, ಎಂಡಿಎ ಮತ್ತು ಕ್ರೀಡಾ ಇಲಾಖೆಯಿಂದ 10 ಕೋಟಿ ವಿಶೇಷ ಅನುದಾನ ನಿರೀಕ್ಷಿಸಲಾಗಿದೆ. ಈ ಅನುದಾನದಲ್ಲಿ ಸಭಾಂಗಣ, ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಪಾಲಿಕೆ ಹೆಸರಿಡಲು ಉದ್ದೇಶಿಸಲಾಗಿದೆ.
ಸಂವಹನ ಕಾರ್ಯಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಸ ಸಂಸ್ಕರಣೆ, ವಿಂಗಡೆ, ಮೂಲದಲ್ಲಿ ಕಸ ಬೇರ್ಪಡಿಸುವಿಕೆ ಹಾಗೂ ಸಾರ್ವಜನಿಕ ಸ್ಥಳ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡದಂತೆ, ಮೂತ್ರ ವಿಸರ್ಜನೆ ಮಾಡದಂತೆ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನ, ಟಿವಿ, ಆಡಿಯೋ, ಪತ್ರಿಕೆಗಳ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ (ಐಇಸಿ) ಹಮ್ಮಿಕೊಳ್ಳಬೇಕಿದೆ. ನಗರದ ಎಲ್ಲ ವಾರ್ಡ್ಗಳಲ್ಲಿ ಮಹಿಳೆಯರ ಸಹಭಾಗಿತ್ವದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಸಮರ್ಪಕ ಬಳಕೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಉದ್ದೇಶಕ್ಕಾಗಿ 13ನೇ ಹಣಕಾಸಿನ ಆಯೋಗದ ಅನುದಾನದಲ್ಲಿ 50 ಲಕ್ಷ ಹಾಗೂ ಪಾಲಿಕೆ ನಿಧಿಯಿಂದ 10 ಲಕ್ಷ ಕಾಯ್ದಿರಿಸಲಾಗಿದೆ.
ಸ್ಮಶಾನಗಳ ಅಭಿವೃದ್ಧಿ: ಸ್ಮಶಾನಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲು ಉದ್ದೇಶಿಸಲಾಗಿದೆ. 2014-15ನೇ ಸಾಲಿನಲ್ಲಿ ಸ್ಮಶಾನಗಳ ನಿರ್ವಹಣೆಗಾಗಿ ಪಾಲಿಕೆ ನಿಧಿಯಿಂದ 2 ಕೋಟಿ, ಅಭಿವೃದ್ಧಿಗಾಗಿ 4 ಕೋಟಿ ಹಾಗೂ ಅನುದಾನಗಳಿಂದ 1.10 ಕೋಟಿ ಕಾಯ್ದಿರಿಸಲಾಗಿದೆ. ಅಲ್ಲದೆ, ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ, ಮುಜರಾಯಿ ಇಲಾಖೆಯಿಂದ ಅನುದಾನ ನಿರೀಕ್ಷಿಸಲಾಗಿದೆ.
ಪ್ರೋತ್ಸಾಹಧನ ಹೆಚ್ಚಳ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 10ಸಾವಿರದಿಂದ 15 ಸಾವಿರ ಹಾಗೂ 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 5 ಲಕ್ಷ ಕಾಯ್ದಿರಿಸಲಾಗಿದೆ.
ಉದ್ಯಾನವನಗಳ ಅಭಿವೃದ್ಧಿ
ಉದ್ಯಾನವನಗಳ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಪಾಲಿಕೆ ನಿಧಿಯಿಂದ 8 ಕೋಟಿ ಹಾಗೂ ಅನುದಾನಗಳಿಂದ 11.55 ಕೋಟಿ ಕಾಯ್ದಿರಿಸಲಾಗಿದೆ. ಪ್ರಮುಖ ಉದ್ಯಾನವನಗಳನ್ನು ಸಮಗ್ರವಾಗಿ ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು.
ಮಾದರಿ ಸೌರಶಕ್ತಿ ನಗರಕ್ಕೆ 4 ಕೋಟಿ
ಭಾರತ ಸರ್ಕಾರದ ಸೌರಶಕ್ತಿ ನಗರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯದಿಂದ ಮೈಸೂರು ನಗರವನ್ನು ಮಾದರಿ ಸೌರಶಕ್ತಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿ, ಸದರಿ ಯೋಜನೆ ಅನುಷ್ಠಾನಕ್ಕಾಗಿ ತಯಾರಿಸಲಾಗಿರುವ ಮಹಾಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರವು ಅನುದಾನ ನೀಡಲಿದ್ದು, ಉಳಿಕೆ ಮೊತ್ತ ಭರಿಸಲು 2014-15ನೇ ಸಾಲಿನ ಬಜೆಟ್ನಲ್ಲಿ 4 ಕೋಟಿ ಮೀಸಲಿಡಲಾಗಿದೆ. ನಗರಪಾಲಿಕೆ ಕಟ್ಟಡ, ವಲಯ ಕಚೇರಿಗಳು, ಚೆಲುವಾಂಬ, ಕುಪ್ಪಣ್ಣ ಪಾರ್ಕ್ ಮತ್ತು ಎಂಡಿಎ ಮುಖ್ಯ ಕಟ್ಟಡಗಳಲ್ಲಿ ಸೋಲಾರ್ ಪವರ್ ಪ್ಲಾಂಟ್ ಅಳವಡಿಸಲು ಉದ್ದೇಶಿಸಲಾಗಿದೆ.
ಸೋಲಾರ್ಗೆ ಸಹಾಯಧನ: ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವ ಹಿಂದುಳಿದ ಕುಟುಂಬಗಳಿಗೆ ಸಹಾಯಧನ ನೀಡಲು ಪಾಲಿಕೆ ನಿಧಿಯಿಂದ 25 ಲಕ್ಷ ಹಾಗೂ ಶೇ.22.75, ಶೇ.7.25 ಮತ್ತು ಶೇ.3 ಕಲ್ಯಾಣ ಕಾರ್ಯಕ್ರಮದಲ್ಲಿ ಶೇ.75 ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 50 ಲಕ್ಷ ಕ್ರಿಯಾಯೋಜನೆ ತಯಾರಿಸುವ ಸಂದರ್ಭದಲ್ಲಿ ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗಿದೆ.
ಗೃಹಭಾಗ್ಯ ಯೋಜನೆ
ಪರಿಶಿಷ್ಟರು ಮತ್ತು ಇತರೆ ಹಿಂದುಳಿದ ವರ್ಗದ ಫಲಾನುಭವಿಗಳು ನಿವೇಶನ ಹೊಂದಿದ್ದಲ್ಲಿ ಹೊಸದಾಗಿ ಪಕ್ಕಾಮನೆ ನಿರ್ಮಿಸಲು ಗರಿಷ್ಠ 70,000ದವರೆಗೆ ಸಹಾಯಧನವನ್ನು 3 ಕಂತುಗಳಲ್ಲಿ ನೀಡಲು ಶೇ.22.75 ಹಾಗೂ ಶೇ.7.25 ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸುವಾಗ ಕ್ರಮವಾಗಿ 3 ಕೋಟಿ ಹಾಗೂ 1 ಕೋಟಿ ನಿಗದಿಪಡಿಸಿದೆ.
ಸಿಸಿ ಕ್ಯಾಮರಾ: ನಗರಪಾಲಿಕೆಯ ಮುಖ್ಯ ಕಚೇರಿ ಹಾಗೂ ಎಲ್ಲ ವಲಯ ಕಚೇರಿಗಳನ್ನು ಗಣಕೀಕರಣಗೊಳಿಸಲು ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ 70 ಲಕ್ಷ ಕಾಯ್ದಿರಿಸಲಾಗಿದೆ.
ಮೀನು ಮಾರುಕಟ್ಟೆ: ನಗರದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆಗಳನ್ನು ಸ್ಥಾಪಿಸಲು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ 2.05 ಕೋಟಿ ಅನುದಾನ ಬಿಡಗಡೆಯಾಗಿದ್ದು, ಬಾಕಿ 2.05 ಕೋಟಿ 2014-15ನೇ ಸಾಲಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪಾಲಿಕೆ ವತಿಯಿಂದ ವಂತಿಗೆ ಸೇರಿ ಒಟ್ಟು 4.57 ಕೋಟಿ ದೇವರಾಜ ಮಾರುಕಟ್ಟೆಯಲ್ಲಿ ಒಂದು, ಎನ್.ಆರ್. ಕ್ಷೇತ್ರದಲ್ಲಿ 1 ಸಗಟು ಮೀನು ಮಾರಾಟ ಮಾರುಕಟ್ಟೆ ಹಾಗೂ ಮಂಡಿ ಮಾರುಕಟ್ಟೆಯಲ್ಲಿ 1 ಚಿಲ್ಲರೆ ಮೀನು ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಆಧುನಿಕ ಕಸಾಯಿಖಾನೆ ನಿರ್ಮಾಣ
ಪಾಲಿಕೆಯು ಕೆಸರೆಯಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಿ, ಈಗಾಗಲೇ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಮಂತ್ರಾಲಯಕ್ಕೆ ಡಿಪಿಆರ್ ಸಲ್ಲಿಸಿದ್ದು, ಅನುಮೋದನೆಯು ಅಂತಿಮ ಹಂತದಲ್ಲಿದೆ. ಇದರ ಸ್ಥಾಪನೆಗೆ ಅಂದಾಜು 3.90 ಕೋಟಿ ವೆಚ್ಚವಾಗುತ್ತದೆ. ಕೇಂದ್ರದಿಂದ 15 ಕೋಟಿ, ರಾಜ್ಯದಿಂದ 5 ಕೋಟಿ ಅನಾದಾನ ಹಾಗೂ ಕೆಯುಐಡಿಎಫ್ಸಿಯಿಂದ 14.90 ಕೋಟಿ ಸಾಲದ ರೂಪದಲ್ಲಿ ನೀಡಲಾಗುತ್ತಿದೆ. ಉಳಿಕೆ 5 ಕೋಟಿ ಪಾಲಿಕೆ ನಿಧಿಯಿಂದ ಭರಿಸಬೇಕಾಗಿದ್ದು, 2014-15ನೇ ಸಾಲಿನ ಬಜೆಟ್ನಲ್ಲಿ ಈ ಮೊತ್ತವನ್ನು ಕಾಯ್ದಿರಿಸಲಾಗಿದೆ.
ಕನ್ನಡ ಸೌಧ ನಿರ್ಮಾಣಕ್ಕೆ 10 ಕೋಟಿ
ನಗರಪಾಲಿಕೆ ವತಿಯಿಂದ ಸುಸಜ್ಜಿತ ಕನ್ನಡ ಸೌಧವನ್ನು ನಿರ್ಮಿಸಲು ಅಯವ್ಯಯದಲ್ಲಿ 10 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಅದೇ ರೀತಿ ಪಾಲಿಕೆ ನಿಧಿಯಿಂದ 50 ಲಕ್ಷ ವೆಚ್ಚದಲ್ಲಿ ಕನಕ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪಾಲಿಕೆಯಿಂದ ವಂತಿಗೆ ಮೊತ್ತ 1.25 ಕೋಟಿ, ಮಾನಂದವಾಡಿ ರಸ್ತೆ ರೇಷ್ಮೆ ಕಾರ್ಖಾನೆ ಎದುರು ಡಾ. ಅಂಬೇಡ್ಕರ್ ಕಲೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡಲು ಯೋಜಿಸಲಾಗಿದೆ. ಡಾ. ಬಾಬು ಜಗಜೀವನರಾಂ ಭವನಕ್ಕೆ 50 ಲಕ್ಷ, ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 62 ಲಕ್ಷ, ಗಾಯತ್ರಿಪುರಂನಲ್ಲಿ ಸೋಲಿಗರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಲು ಸರ್ಕಾರದ ಆದೇಶದಂತೆ ನಿರ್ಧರಿಸಲಾಗಿದೆ.
ಪರಿಶಿಷ್ಟರ ಕಲ್ಯಾಣ: 2014-15ನೇ ಸಾಲಿನಲ್ಲಿ ಸರ್ಕಾರದ ಆದೇಶದಂತೆ ಪಾಲಿಕೆಯು ಸ್ವಂತ ಆದಾಯ, ರಾಜ್ಯ ಹಣಕಾಸು ಆಯೋಗದ ಮುಕ್ತವಿಧಿ ಅನುದಾನದಿಂದ ಶೇ.22.75 ರಂತೆ ಲೆಕ್ಕಾಚಾರ ಮಾಡಿ 17.10 ಕೋಟಿ ಕಾಯ್ದಿರಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪರಿಶಿಷ್ಟರ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಶೇ.16.20 ಮತ್ತು ಪರಿಶಿಷ್ಟ ಪಂಗಡದ ನಾಗರೀಕರ ಕಲ್ಯಾಣಕ್ಕಾಗಿ ಶೇ.6.55 ಅನುದಾನ ಮೀಸಲಿರಿಸಿ, ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ.
ಬಡವರು, ಅಂಗವಿಲಕರ ಕಲ್ಯಾಣ: ನಗರದ ಇತರೆ ಬಡಜನರ ಶ್ರೇಯೋಭಿವೃದ್ಧಿಗಾಗಿ 2014-15ನೇ ಸಾಲಿನಲ್ಲಿ 5.45 ಕೋಟಿ ಕಾಯ್ದಿರಿಸಲಾಗಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಶೇ.3 ಅನುದಾನದಲ್ಲಿ 2.25 ಕೋಟಿ ಕಾಯ್ದಿರಿಸಲಾಗಿದೆ. ಇದಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು.
ಕುವೆಂಪು ಪ್ರತಿಮೆ; ಮಲ್ಲೇಶ್ಗೆ ಪ್ರಶಂಸೆ
ಕುವೆಂಪುನಗರದಲ್ಲಿ ಕುವೆಂಪು ಅವರ ಕಂಚಿನ ಪ್ರತಿಮೆ ಸ್ಥಾಪಿಸಿ, ಮುಖ್ಯಮಂತ್ರಿ ಅವರಿಂದ ಉದ್ಘಾಟಿಸಿದ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಅವರಿಗೆ ಸಹ ಸದಸ್ಯರು ಶ್ಲಾಘಿಸಿದರು. ಇದೇ ವೇಳೆ ವಿವಿಧ ಕಾಮಗಾರಿಗಳ ಬಿಲ್ ಅನ್ನು ಬಿಡುಗಡೆ ಮಾಡದ ಕಡತಗಳನ್ನು ಬಾಕಿ ಉಳಿಸಿಕೊಂಡಿರುವ ಎಸ್ಇ ಕೃಷ್ಣ ಅವರನ್ನು ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ತರಾಟೆಗೆ ತೆಗೆದುಕೊಂಡರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಭೈರಪ್ಪ ಅವರು ಇತರೆ ಸ್ಥಾಯಿ ಸಮಿತಿಗಳ ಪದಾಧಿಕಾರಿಗಳ ಸಭೆ ಕರೆದಿಲ್ಲ ಎಂದು ಸದಸ್ಯ ನಾಗಭೂಷಣ್ ಆರೋಪಿಸಿದರು. ಎಲ್ಲರಿಗೂ ಆಹ್ವಾನಿಸಲಾಗಿದೆ. ಈ ಸಂಬಂಧ ದಾಖಲೆ ಇದೆ ಎಂದು ಭೈರಪ್ಪ ಸ್ಪಷ್ಟಪಡಿಸಿದರು.