ಖಾತೆ ವರ್ಗಕ್ಕೆ ಶುಲ್ಕ ಪರಿಷ್ಕರಣೆಗೆ ನಿರ್ಧಾರ
ಕ.ಪ್ರ.ವಾರ್ತೆ ಮೈಸೂರು ಫೆ. 25
ತನ್ನ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು 2014-15ನೇ ಸಾಲಿನ ಆಯವ್ಯಯದಲ್ಲಿ ಖಾತಾ ವರ್ಗಾವಣೆ ಶುಲ್ಕ ಪರಿಷ್ಕರಿಸುವುದಾಗಿ ಪ್ರಕಟಿಸಿದೆ. ಅಲ್ಲದೆ ಕಂದಾಯ ಬಡಾವಣೆಗಳಿಂದ ಆಸ್ತಿ ತೆರಿಗೆ ಸಂಗ್ರಹಣೆ, ನಿರ್ಮಾಣ ಹಂತದ ಕಟ್ಟಡಗಳ ಸಂಪ್ಗೆ ಬಿದ್ದು ಮೃತಪಡುವವರಿಗೆ 1 ಲಕ್ಷದವರೆಗೆ ಪರಿಹಾರವನ್ನು ವಿಮಾ ಕಂಪನಿ ಮೂಲಕ ಪಾವತಿಸಲು ನಿರ್ಧರಿಸಿದೆ.
ಉಳಿದಂತೆ ಹೊಸ ಯಾವುದೇ ಕಾರ್ಯಕ್ರಮಗಳಿಲ್ಲದೆ, ಹಳೆಯ ಯೋಜನೆಗಳಿಗೆ ಅನುದಾನ ನೀಡುವ 703.46 ಕೋಟಿಗಳ ಅಯವ್ಯಯವನ್ನು ನಗರಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಭೈರಪ್ಪ ಅವರು ಮಂಗಳವಾರ ಮಂಡಿಸಿದರು.
ಆರಂಭಿಕ ಶುಲ್ಕ 102.49 ಕೋಟಿ, ಜಮೆಗಳು 703.46 ಕೋಟಿ ಸೇರಿ ಒಟ್ಟು ಆದಾಯ 805.95 ಕೋಟಿ, ವೆಚ್ಚ 803.10 ಕೋಟಿ, ಉಳಿತಾಯ 2.84 ಕೋಟಿ ಆಗಲಿದೆ.
2014-15ನೇ ಸಾಲಿಗೆ ನಗರಪಾಲಿಕೆಗೆ ಮುಖ್ಯಮಂತ್ರಿಯವರ ನಗರೋತ್ಥಾನ ಅನುದಾನ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಬಿಡುಗಡೆಯಾಗುವ ವಿಶೇಷ ಅನುದಾನ ನಿರೀಕ್ಷೆಯಲ್ಲಿ ಈ ಬಾರಿಯ ಬಜೆಟ್ನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಸಂಪನ್ಮೂಲ ಕ್ರೋಢೀಕರಣ ಮೂಲಗಳು: 2014-15ನೇ ಸಾಲಿಗೆ ಆಸ್ತಿ ತೆರಿಗೆಯಿಂದ 103.07 ಕೋಟಿ ರು. ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಂದಾಯ ಬಡಾವಣೆಗಳಿಂದ 7 ಕೋಟಿ ಆಸ್ತಿ ತೆರಿಗೆ ನಿರೀಕ್ಷಿಸಲಾಗಿದೆ. ಖಾತಾ ವರ್ಗಾವಣೆ ಶುಲ್ಕದ ಪರಿಷ್ಕರಣೆಯಿಂದ 20 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ನೀರಿನ ತೆರಿಗೆ 40.83 ಕೋಟಿ ಹಾಗೂ ಒಳಚರಂಡಿ ನಿರ್ವಹಣಾ ಕರವಾಗಿ 12.25 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಕಟ್ಟಡ ಪರವಾನಗಿ ಶುಲ್ಕ, ನೆಲಬಾಡಿಗೆ, ರಸ್ತೆ ಅಗೆತ, ಉತ್ತಮತೆ, ಪರಿಶೀಲನಾ ಶುಲ್ಕ, ನೀರಿನ ಸಂಪರ್ಕ ಶುಲ್ಕ, ಕಟ್ಟಡ ಪೂರ್ಣಗೊಂಡ ವರದಿ, ದಂಡ, ಒಳಚರಂಡಿ ಶುಲ್ಕಗಳು ಹಾಗೂ ನಗರ ಯೋಜನೆಗೆ ಸಂಬಂಧಿಸಿದ ಇತರೆ ಮೂಲಗಳಿಂದ 11.27 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಉದ್ದಿಮೆ ಪರವಾನಗಿಯಿಂದ 5.50 ಕೋಟಿ, ವಾಹನ ನಿಲುಗಡೆ ಶುಲ್ಕದಿಂದ 50 ಲಕ್ಷ, ಪಾಲಿಕೆಯ ವಾಣಿಜ್ಯ ಸಂಕೀರ್ಣಗಳು ಮತ್ತು ಮಾರುಕಟ್ಟೆಗಳ ಬಾಡಿಗೆಯಿಂದ 2.80 ಕೋಟಿ, ಗರುಡ ಮಾಲ್ ನೆಲಗುತ್ತಿಗೆ ಬಾಡಿಗೆಯಿಂದ 1.56 ಕೋಟಿ, ಜಾಹೀರಾತು ತೆರಿಗೆ ಹಾಗೂ ನೆಲಬಾಡಿಗೆಯಿಂದ 1.18 ಕೋಟಿ ನಿರೀಕ್ಷಿಸಲಾಗಿದೆ.
ಸರ್ಕಾರಿ ಆದೇಶ ಹಿನ್ನೆಲೆಯಲ್ಲಿ ಪಾಲಿಕೆಯು ಸಾರಿಗೆ ಅಧಿಕಾರಿಗಳ ಸಹಭಾಗಿತ್ವದೊಂದಿಗೆ 50 ಲಕ್ಷ ವಾಹನಗಳ ಮೇಲೆ ಮೂಲಭೂತ ಸೌಕರ್ಯ ಕರವನ್ನು ವಸೂಲಿ, ರಸ್ತೆಬದಿ ವ್ಯಾಪಾರಿಗಳಿಗಾಗಿ ಮಾಡುವ ಸುರಿಕ್ಷಿತ ಆಹಾರ ವಲಯಗಳಿಂದ 1.10 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಕೇಂದ್ರ, ರಾಜ್ಯ ಸರ್ಕಾರದ ಅನುದಾನ: ರಾಜ್ಯ ಹಣಕಾಸು ಆಯೋಗದಿಂದ ಮುಕ್ತನಿಧಿ ಅನುದಾನ 2013-14ನೇ ಸಾಲಿಗೆ 26.65 ಕೋಟಿ ಪೈಕಿ 15.24 ಕೋಟಿ ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯಕ್ಕೆ 29.32 ಕೋಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 2014-15ನೇ ಸಾಲಿಗೆ ಎಡಿಬಿ ಸಾಲ ಮರುಪಾವತಿ ಸೇರಿದಂತೆ 38 ಕೋಟಿ ಅನುದಾನನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದಿಂದ 2013-14ನೇ ಸಾಲಿಗೆ ಬೀದಿದೀಪ ಹಾಗೂ ನೀರು ಸರಬರಾಜು ವಿದ್ಯುಚ್ಚಕ್ತಿ ಬಿಲ್ ಪಾವತಿಗಾಗಿ 39.64 ಕೋಟಿ ಅನುದಾನ ನಿರೀಕ್ಷಿಸಿದ್ದು, 32.70 ಕೋಟಿ ಬಿಡುಗಡೆಯಾಗಿದೆ. 2014-15ನೇ ಸಾಲಿಗೆ 69.99 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.
ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆ ಅಧಿಕಾರಿ, ನೌಕರರ ವೇತನ, ಕುಟುಂಬ ಕಲ್ಯಾಣ ಕೇಂದ್ರಗಳ ಹಾಗೂ ರಾಜೀವ್ ಆವಾಜ್ ಯೋಜನೆ ಸಿಬ್ಬಂದಿಗೆ ವೇತನ ಅನುದಾನವಾಗಿ 2014-15ನೇ ಸಾಲಿಗೆ 71.40 ಕೋಟಿ ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿದ್ದು, ಒಟ್ಟು ಸಿಬ್ಬಂದಿ ವೆಚ್ಚ 76.24 ಕೋಟಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಹೆಚ್ಚುವರಿ 4.84 ಕೋಟಿ ಪಾಲಿಕೆ ನಿಧಿಯಿಂದ ಭರಿಸಬೇಕಾಗುತ್ತದೆ.
13ನೇ ಹಣಕಾಸು ಆಯೋಗದಿಂದ 28.91 ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಂಸದರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಿಂದ 7 ಕೋಟಿ, ಮುಖ್ಯಮಂತ್ರಿಯವರ ನಗರೋತ್ಥಾನ ಎರಡು ಮತ್ತು ಮೂರನೆ ಹಂತದ ಅನುದಾನಗಳಿಂದ 112.35 ಕೋಟಿ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಬಿಡುಗಡೆಯಾದ ವಿಶೇಷ ಅನುದಾನ 100 ಕೋಟಿ ನಿರೀಕ್ಷಿಸಲಾಗಿದೆ. ಜೆ.ಪಿ. ನಗರ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗಾಗಿ 10 ಕೋಟಿ ವಿಶೇಷ ಅನುದಾನ, ನರ್ಮ್ ಯೋಜನೆಗಳಿಗಾಗಿ 29.27 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.
ಸಂಪ್ ದುರಂತ; 1 ಲಕ್ಷ ಪರಿಹಾರ
ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತ ಕಟ್ಟಡಗಳ ಸಂಪ್ಗೆ ಚಿಕ್ಕ ಮಕ್ಕಳು ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಕಟ್ಟಡ ಪರವಾನಗಿ ನೀಡುವ ಸಂದರ್ಭದಲ್ಲಿ ವಿಮಾ ಶುಲ್ಕವನ್ನು ಸಂಗ್ರಹಿಸಿ ವಿಮಾ ಕಂಪನಿಗಳಿಗೆ ಪಾವತಿಸಿ ಇಂಥ ಅಪಘಾತ ಸಂಭವಿಸಿದಾಗ 1 ಲಕ್ಷದವರೆಗೆ ಪರಿಹಾರವನ್ನು ವಿಮಾ ಕಂಪನಿಯಿಂದ ಪಾವತಿಸಲು ಯೋಜಿಸಲಾಗಿದೆ. ಮೇಯರ್ ಎನ್.ಎಂ. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ವಿ. ಶೈಲೇಂದ್ರ, ಆಯುಕ್ತ ಪಿ.ಜಿ. ರಮೇಶ್ ಇದ್ದರು.
ಪಾಲಿಕೆ ಆಸ್ತಿ ಸಂರಕ್ಷಣೆಗೆ 2 ಕೋಟಿ ಅನುದಾನ
ಮೈಸೂರು: ನಗರಪಾಲಿಕೆ ಆಸ್ತಿಗಳನ್ನು ಗುರುತಿಸಿ ಸಂರಕ್ಷಿಸಲು 2014-15ನೇ ಸಾಲಿನ ಅಯವ್ಯಯದಲ್ಲಿ 2 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಅಲ್ಲದೆ, ವಲಯ ಕಚೇರಿ 6ರಲ್ಲಿ ಪಾಲಿಕೆ ಆಸ್ತಿಗಳ ಸಂರಕ್ಷಣೆಗಾಗಿ ಕಚೇರಿ ತರೆಯಲಾಗಿದೆ.
ಬಜೆಟ್ನಲ್ಲಿ ಏನೇನಿದೆ?
ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಒಂದು ಮಾದರಿ ಅಂಗನವಾಡಿ ಕೇಂದ್ರಗಳ ನಿರ್ಮಿಸಲು ಉದ್ದೇಶಿಸಲಾಗಿದೆ.
ಅಂಗವಿಕಲರು ರಸ್ತೆ ದಾಟಲು ಹಾಗೂ ನಡೆಯಲು ಅನುಕೂಲವಾಗುವಂತೆ ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ಶೇ.3 ಕಲ್ಯಾಣ ಕಾರ್ಯಕ್ರಮದಡಿ ಕ್ರಮ ವಹಿಸಲು ಉದ್ದೇಶಿಸಲಾಗಿದೆ.
ನಗರದ ಯಾದವಗಿರಿ, ಕೆಸರೆ ಮತ್ತು ಸರಸ್ವತಿಪುರಂನ ದೋಬಿಘಾಟ್ ಅಭಿವೃದ್ಧಿಗಾಗಿ 50 ಲಕ್ಷ ಕಾಯ್ದಿರಿಸಲಾಗಿದೆ.
ನಗರದಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು 75 ಲಕ್ಷ ರು. ಕಾಯ್ದಿರಿಸಲಾಗಿದೆ.
ಬಯೋಗ್ಯಾಸ್ ತಯಾರಿಕಾ ಘಟಕ ಸ್ಥಾಪಿಸಲು ಎಸ್ಎಫ್ಸಿ ಮುಕ್ತನಿಧಿ ಅನುದಾನದ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು 1.50 ಕೋಟಿ ಕಾಯ್ದಿರಿಸಲಾಗಿದೆ. ಬಯೋಗ್ಯಾಸ್ ಘಟಕ ಅಳವಡಿಸಿಕೊಳ್ಳಲು ಮುಂದೆ ಬರುವ ಸಾರ್ವಜನಿಕರಿಗೆ ಸಹಾಯ ಧನ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ ಪಾಲಿಕೆ ನಿಧಿಯಿಂದ 10 ಲಕ್ಷ ಕಾಯ್ದಿರಿಸಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಡೀಸೆಲ್ ತಯಾರಿಸುವ ಘಟಕ ಸ್ಥಾಪಿಸಲು 25 ಲಕ್ಷ ಕಾಯ್ದಿರಿಸಲಾಗಿದೆ.
ಕ್ರಿಕೆಟ್ ಹೊರತುಪಡಿಸಿ ಇತರೆ ಕ್ರೀಡೆಗಳನ್ನು ಉತ್ತೇಜಿಸಲು ಸುಸಜ್ಜಿತ ಆಟದ ಮೈದಾನ ನಿರ್ಮಾಕ್ಕಾಗಿ 4 ಕೋಟಿ ಕಾಯ್ದಿರಿಸಲಾಗಿದೆ.
ಜೆ.ಪಿ. ನಗರದ ಎಫ್ ಬ್ಲಾಕ್ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ, ನಗರಪಾಲಿಕೆ ಸಹಯೋಗದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಣೆ ಹಾಗೂ ಪ್ರಶಸ್ತಿ ಪ್ರದಾನಕ್ಕಾಗಿ 10 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ.
ನಗರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಜ್ಞಾನಸಿರಿ ಹಾಗೂ ವಿದ್ಯಾ ಚೈತನ್ಯ ಯೋಜನೆಯಡಿ ಪ್ರೋತ್ಸಾಹ ಧನ ನೀಡಲು 15 ಲಕ್ಷ ಕಾಯ್ದಿರಿಸಲಾಗಿದೆ.
ಹಿಂದುಳಿದ ವರ್ಗ, ಪರಿಶಿಷ್ಟರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು (ಭಾಗ್ಯಜ್ಯೋತಿ ಯೋಜನೆ) ಸಹಾಯಧನ ನೀಡಲು 40 ಲಕ್ಷ ನಿಗದಿಪಡಿಸಲಾಗಿದೆ.
ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು (ಭಾಗ್ಯಜಲ) ಶೇ.22.75, ಶೇ.7.25 ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಲು 60 ಲಕ್ಷ ನಿಗದಿ.
ರಂಗಭೂಮಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಧನ ನೀಡಲು ಉದ್ದೇಶಿಸಿದ್ದು, ಇದಕ್ಕಾಗಿ 2 ಲಕ್ಷ ಕಾಯ್ದಿರಿಸಲಾಗಿದೆ. ಪ್ರತಿ ಕಲಾವಿದರಿಗೆ 10,000 ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
ಪಾಲಿಕೆಯಿಂದ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ಗ್ರಂಥಾಲಯ ಕರದಲ್ಲಿ 25 ಲಕ್ಷ ವೆಚ್ಚದಲ್ಲಿ ಸಂಚಾರಿ ಗ್ರಂಥಾಲಯ ವಾಹನ ಖರೀದಿಸಿ ಗ್ರಂಥಾಲಯಕ್ಕೆ ನೀಡುವುದು. ಎಲ್ಲ ವಾರ್ಡ್ಗಳಲ್ಲಿ ಲಭ್ಯವಿರುವ ಪಾಲಿಕೆಯ ಜಾಗದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸುಸಜ್ಜಿತ ಗ್ರಂಥಾಲಯಗಳ ನಿರ್ಮಿಸಲು ಉದ್ದೇಶಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು, ಬಡತನ ರೇಖೆಗಿಂತ ಕೆಳಗಿರುವವರು, ಪರಿಶಿಷ್ಟರು, ಅಂಗವಿಕಲರು ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸುವುದು.
ಸ್ವಯಂ ಉದ್ಯೋಗ ಕೈಗೊಳ್ಳುವ ಪರಿಶಿಷ್ಟರು, ಹಿಂದುಳಿದವರು ಮತ್ತು ಅಂಗವಿಕಲರಿಗೆ ಶೇ.7.25, ಶೇ.22.75 ಹಾಗೂ ಶೇ.3 ಯೋಜನೆಯಡಿ ಸಹಾಯಧನ ನೀಡುವುದು. ಮಹಿಳಾ ಸಬಲೀಕರಣಕ್ಕೆ ಈ ಯೋಜನೆಗಳಡಿ ಶೇ.50 ಸೌಲಭ್ಯಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲು ಉದ್ದೇಶಿಸಲಾಗಿದೆ.