ಕಲಬೆರಕೆ ಹಾಲು ಕಡೆಗೆ ಕಠಿಣ ಕಾನೂನು ಅವಶ್ಯಕ
ಯಳಂದೂರು: ರಾಜ್ಯದಲ್ಲಿ ಕಲಬೆರಕೆ ಹಾಲು ಉತ್ಪಾದನೆ ನಿಯಂತ್ರಣ ಮಾಡಲು ಶಾಸನ ಸಭೆ ಕಠಿಣ ಕಾನೂನು ಜಾರಿ ಮಾಡುವುದರ ಜೊತೆಯಲ್ಲಿ ಕಲಬೆರಕೆ ಹಾಲು ಉತ್ಪಾದಿಸಿ ಮಾರಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡುವಂಥ ಕಠಿಣ ಕಾಯ್ದೆ ಜಾರಿಗೆ ತರಬೇಕೆಂದು ಮೈಮುಲ್ ನಿರ್ದೇಶಕ ಅಂಬಳೆ ಶಿವಾನಂದಸ್ವಾಮಿ ಒತ್ತಾಯಿಸಿದರು.
ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹೊರ ರಾಜ್ಯಗಳಲ್ಲಿ ಕಲಬೆರಕೆ ಹಾಲು ಉತ್ಪಾದನೆ ಮಾಡಿ ಮಾರಾಟ ಮಾಡುವವರ ವಿರುದ್ಧ ಅಲ್ಲಿನ ಸರ್ಕಾರಗಳು ಜೀವಾವಧಿ ಶಿಕ್ಷೆ ಕಾಯ್ದೆ ಜಾರಿಗೆ ತಂದಿದ್ದು ಅಂತಹ ಕಾಯ್ದೆ ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದರು.
ಹಾಲಿಗೆ ರಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿ ಕಲಬೆರಕೆ ಹಾಲು ತಯಾರಿಸಿ ಮಾರುಕಟ್ಟೆಗೆ ಬಿಡುವುದರಿಂದ ಗ್ರಾಹಕರು ಕಲಬೆರಕೆ ಹಾಲು ಖರೀದಿಸಿ ಅದೇ ಹಾಲಿನಿಂದ ಕಾಫಿ, ಟೀ ಮಾಡಿ ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದು ಹೇಳಿದರು.
ಈಗಾಗಲೆ ನ್ಯಾಯಾಲಯ ಎಲ್ಲಾ ರಾಜ್ಯದಲ್ಲೂ ಹಾಲು ಉತ್ಪಾದನೆ ಯಾವ ಗುಣಮಟ್ಟ ಹೊಂದಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಆಯಾ ರಾಜ್ಯದ ಕಾರ್ಯದರ್ಶಿಗೆ ಆದೇಶ ನೀಡಿದೆ. ಅದೇ ರೀತಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ವರದಿ ನೀಡುವಂತೆ ಸೂಚನೆ ಜೊತೆ ಶಾಸನ ಸಭೆಯಲ್ಲಿ ಕಲಬೆರಕೆ ಕಳಪೆ ಹಾಲು ಉತ್ಪಾದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾನೂನು ಜಾರಿ ಮಾಡುವಂತೆ ಆದೇಶ ನೀಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯನ್ನು 2006 ರಲ್ಲಿ ಜಾರಿಗೆ ಬಂದಿರುವುದರಿಂದ ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಆಹಾರೋತ್ಪಾನ್ನಗಳನ್ನು ತಯಾರಿಸುವ ಮಳಿಗೆಗಳು ನೊಂದಣಿ ಮಾಡಿಸಬೇಕು. ಅದೇ ರೀತಿ ಹಾಲು ಪಕ್ವ ಪರಿಪೂರ್ಣ ಆಹಾರವಾಗಿರುವುದರಿಂದ ಹಾಲನ್ನು ರಸಾಯನಿಕಗಳಿಂದ ಮಿಶ್ರಣ ಮಾಡಿ ಮಾರಾಟ ಮಾಡಿದರೆ ಕಾಯ್ದೆ ಪ್ರಕಾರ ಕಠಿಣ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಕಲಬೆರಕೆ ಹಾಲುಗಳನ್ನು ತಡೆದು ಗುಣ ಮಟ್ಟದ ಹಾಲು ಶೇಖರಣೆ ಮಾಡುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಜತೆಯಲ್ಲಿ ದೇಶ ಆರ್ಥಿಕವಾಗಿ ಸಮೃದ್ಧಿಯಾಗುತ್ತದೆ. ಹೈನುಗಾರಿಕೆ ನಡೆಸುವವರು ಸ್ವಾವಲಂಬಿಯಾಗಿ ಬದುಕುಲು ಸಾಧ್ಯ ಎಂದು ತಿಳಿಸಿದರು.
ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ನಾಗಮ್ಮ ವೆಂಕರಾಮು, ಶಿವರಾಮು, ದೊಡ್ಡಯ್ಯ, ಐಡಿಯಾ ವೆಂಕಟೇಶ್, ವೈ.ಕೆ.ಮೋಳೆ ವಿ.ನಾಗರಾಜು, ಕಾರ್ಯದರ್ಶಿ ಶಿವಮ್ಮ, ಸಮಾಜ ಸೇವಕ ವೈ.ಎನ್. ಮಹದೇವಶೆಟ್ಟಿ, ಕರುಣಾಟ್ರಸ್ಟ್ ಸಂಪನ್ಮೂಲ ಅಧಿಕಾರಿ ರಾಜು, ಯಜಮಾನ್ ವೆಂಕಟೇಶ್, ಎಂ. ಚಿನ್ನಸ್ವಾಮಿ, ಮೈಮುಲ್ ವಿಸ್ತರಣಾಧಿಕಾರಿ ಪ್ರಭುಸ್ವಾಮಿ, ರಾಮಶೆಟ್ಟಿ, ಶೋಭ ನಾಗರಾಜು, ಚಿಕ್ಕಪುಟ್ಟಶೆಟ್ಟಿ, ಕೆಇಬಿ ಮಹದೇವಶೆಟ್ಟಿ, ಚಂಗಚಹಳ್ಳಿ ಮೈನಾವತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಂಬಳೆ ಪುಟ್ಟಬುದ್ದಿ, ಹೊನ್ನೂರು ರಾಜಶೇಖರ್ ಗ್ರಾಮದ ಯಜಮಾನರು ಮತ್ತು ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.