ಕಲ್ಲೂರೇಶ್ವರ ದೇಗುಲಕ್ಕೆ ಬೇಕಿದೆ ಕಾಯಕಲ್ಪ
ಧರ್ಮಾಪುರ ನಾರಾಯಣ್
ಹುಣಸೂರು: ಐತಿಹಾಸಿಕ ಮತ್ತು ಪ್ರವಾಸಿಗರ ತಾಣವಾಗಿರುವ ಹುಣಸೂರು ತಾಲೂಕಿನ ಕಲ್ಲೂರಪ್ಪನ ಬೆಟ್ಟದ ಮೇಲಿರುವ ಬೃಹದಾಕಾರದ ಬಂಡೆಯ ಗುಹೆಯೊಳಗೆ ಮೂಡಿರುವ ಕಲ್ಲೂರೇಶ್ವರನಿಗೆ ಶಿವರಾತ್ರಿ ಹಬ್ಬದಲ್ಲಿ ಕೊಂಡೋತ್ಸವ, ಅಭಿಷೇಕ, ವಿಶೇಷ ಪೂಜೆ ಮತ್ತು ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ.
ಹನಗೋಡು ಹೋಬಳಿಯ ಕಲ್ಲೂರಪ್ಪನ ಬೆಟ್ಟ ನಗರದ ಪ್ರಶಾಂತ ವಾತಾವರಣದ ಮಧ್ಯೆ ಕಡಿದಾದ ಬೆಟ್ಟದ ಮೇಲಿರುವ ಬೃಹದಾಕಾರದ ಬಂಡೆಯ ನಡುವೆ ಕಲ್ಲೂರೇಶ್ವರ ಕುಳಿತಿದ್ದಾನೆ. ಕಲ್ಲೂರೇಶ್ವರನಿಗೆ ಬಿಸಿಲ ಝಳ ಸೋಕಬಾರದೆಂಬಂತೆ ಬಂಡೆಗಳ ನಡುವೆಯೇ ಬೃಹದಾಕಾರದ ನೇರಳೆ, ಬಸರಿ ಮರಗಳು ಬೆಳೆದು ನಿಂತು ತಂಪನೆರೆಯುತ್ತಿವೆ. ಆದರೆ ಸುತ್ತಮುತ್ತ ಇದ್ದ ಅರಣ್ಯವೆಲ್ಲವೂ ಈಗ ಮಾಯವಾಗಿದೆ.
ಶಿವರಾತ್ರಿ ಹಬ್ಬದಲ್ಲಿ ಕೊಂಡೋತ್ಸವ, ವಿಶೇಷ ಪೂಜೆ, ಎಣ್ಣೆಮಜ್ಜನ, ಎರಡು ದಿನಗಳ ಜಾತ್ರೆ ನಡೆಸಲಾಗುತ್ತಿದೆ. ಸುತ್ತಮುತ್ತಲ ಪೆಂಜಳ್ಳಿ, ಹರಳಹಳ್ಳಿ, ಕಿರಂಗೂರು, ಹನಗೋಡು, ಹಿಂಡುಗುಡ್ಲು, ಹೆಗ್ಗಂದೂರು ಸೇರಿದಂತೆ 16 ಗ್ರಾಮಗಳು ಸೇರಿ ಜಾತ್ರೆ, ಕೊಂಡೋತ್ಸವ ನಡೆಸುತ್ತಿವೆ.
ಈ ಬೆಟ್ಟದ ಮೇಲಿರುವ ಕಲ್ಲುಬಂಡೆಯೊಳಗೆ ಗವಿಯಲ್ಲಿ ಈಶ್ವರ ಲಿಂಗವಿದೆ. ಗವ್ವೆನ್ನುವ ಕತ್ತಲೆಯ ಗವಿಯೊಳಗೆ ಶಿವಲಿಂಗ ಹಾಗೂ ಲಿಂಗದ ಮುಂದೆ ಬಸವ ಕುಳಿತಿದ್ದಾನೆ. ಅಲ್ಲೇ 101 ಲಿಂಗಗಳನ್ನು ಕಲ್ಲುಬಂಡೆಯ ಮೇಲೆ ಕೆತ್ತಲಾಗಿದೆ. ಈ ದೇವಾಲಯಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳು ಸಿಗುತ್ತಿಲ್ಲ. ಆದರೆ ಇದಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆಯೆನ್ನುವುದು ಜಾನಪದರ ನಂಬಿಕೆಯಾಗಿದೆ. ದೇವಸ್ಥಾನದ ಮುಖ್ಯದ್ವಾರದ ಮುಂಭಾಗ ದೇವರ ಪಾದದ ವಿಗ್ರಹಗಳಿವೆ. ಸನ್ಯಾಸಿಯೊಬ್ಬರು ಹಲವಾರು ವರ್ಷಗಳ ಕಾಲ ಇಲ್ಲೇ ಬೀಡುಬಿಟ್ಟು ಧ್ಯಾನ, ಪೂಜೆಯಲ್ಲಿ ತೊಡಗಿದ್ದರು. ಅವರ ಕಾಲಾ ನಂತರ ಅವರ ಸಮಾಧಿಯನ್ನು ಬೆಟ್ಟದ ತಪ್ಪಲಿನಲ್ಲೇ ಮಾಡಲಾಗಿದೆ.
ಒಂದು ಕಾಲದಲ್ಲಿ ಸುತ್ತಮುತ್ತಲ ಮೂರು ಸಾವಿರ ಎಕರೆ ಭೂಪ್ರದೇಶ ದಟ್ಟಾರಣ್ಯವಾಗಿತ್ತು.
ಸಮತಟ್ಟಾದ ಭೂಮಿ ಹೊಂದಿರುವ ಈ ಭಾಗದಲ್ಲಿ ಇದೊಂದೇ ದೊಡ್ಡದಾದ ಬೆಟ್ಟ. ಕಲ್ಲೂರಪ್ಪನ ಬೆಟ್ಟದ ಮುಂಭಾಗ ಕೂಡ ಒಂದೆರಡು ಬೆಟ್ಟಗಳಿವೆ. ವಿಶಿಷ್ಟವೆಂದರೆ ಈ ಬೆಟ್ಟಗಳ ತುಂಬ ಚಿತ್ರ ವಿಚಿತ್ರ ಆಕಾರದ, ಹಲವಾರು ರೂಪಗಳನ್ನು ತೋರುವ ಕಲ್ಲು ಬಂಡೆಗಳಿವೆ. ಒಂದೊಂದು ಕಲ್ಲು ಬಂಡೆಯೂ ಒಂದೊಂದು ಕಥೆಯನ್ನು, ಭಾವನೆಯನ್ನು ವ್ಯಕ್ತಪಡಿಸುತ್ತಿವೆಯೇನೋ ಎಂದೆನಿಸುವಷ್ಟು ಅದ್ಭುತವಾಗಿವೆ. ಕ್ಯಾಮೆರಾ ಕಣ್ಣಲ್ಲಂತೂ ಕಲ್ಲುಗಳು ಮತ್ತಷ್ಟು ಮಾತನಾಡುತ್ತವೆ.
ದೇವಸ್ಥಾನದ ಒಂದು ಬದಿಯಲ್ಲಿ ಪ್ರಕೃತಿ ನಿರ್ಮಿತ ಜಾಗವೊಂದಿದೆ. ಎರಡು ಕಲ್ಲುಬಂಡೆಗಳ ನಡುವೆ ಒಂದೆರಡು ಹುಲಿಗಳು ಕುಳಿತು ತಮ್ಮ ಬೇಟೆ ಪ್ರಾಣಿಯನ್ನು ನೋಡಲು ಸೂಕ್ತವಾಗಿರುವ ಸ್ಥಳ ಇದಾಗಿದೆ. ಹಿಂದೆ ಹುಲಿಗಳು ಕಲ್ಲೂರಪ್ಪನ ಗವಿಯೊಳಗೆ ಹಾಗೂ ಪಕ್ಕದ ಸನ್ಯಾಸಿ ಧ್ಯಾನ ಮಾಡುತ್ತಿದ್ದ ಗವಿಯೊಳಗೆ ಬಂದು ಕೂರುತ್ತಿದ್ದವು ಎನ್ನಲಾಗಿದೆ.
ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣಿ ನಿರ್ಮಿಸುವುದು ಹಿಂದಿನ ಕಾಲದ ಜನರ ಸಂಪ್ರದಾಯ. ಅಂತೆಯೇ ಕಲ್ಲೂರೇಶ್ವರನ ಪೂಜಾ ವಿಧಿಗಳಿಗಾಗಿ ಬೆಟ್ಟದ ತಪ್ಪಲಿನಲ್ಲಿ ಕಲ್ಯಾಣಿಯೊಂದನ್ನು ಅಂದಿನ ಕಾಲದಲ್ಲೇ ನಿರ್ಮಿಸಿದ್ದರು. ಆದರೆ ಇಂದು ಅದು ಸಂಪೂರ್ಣ ಬತ್ತಿರುವುದಲ್ಲದೇ ಹೂಳು ತುಂಬಿ ಮುಚ್ಚಿ ಹೋಗಿದೆ.
1982ರ ಈ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಬೇಕೆನ್ನುವ ಚಿಂತನೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ತೇರು ನಿರ್ಮಿಸಬೇಕೆಂದಿದೆ. ಮುಚ್ಚಿ ಹೋಗಿರುವ ಕಲ್ಯಾಣಿಯ ಪುನರುಜ್ಜೀವನ ಆಗಬೇಕಿದೆ. ತಾಲೂಕು ಆಡಳಿತ ಸಹಕಾರ ನೀಡಿದರೆ ಐತಿಹಾಸಿಕ ಮಹತ್ವವುಳ್ಳ ಕಲ್ಲೂರಪ್ಪನ ಬೆಟ್ಟವನ್ನು ಪ್ರವಾಸಿ ಕೇಂದ್ರವನ್ನಾಗಿಸಬಹುದು. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಬೇಕಾಗಿದೆ ಎಂದು ಗ್ರಾಪಂ ಅಧ್ಯಕ್ಷ ದಾ.ರಾ. ಮಹೇಶ್ ಕೋರುತ್ತಾರೆ.
ವಿವಿಧೆಡೆ ಜಾತ್ರಾ ಮಹೋತ್ಸವ: ಹುಣಸೂರು ತಾಲೂಕಿನ ಕೊಳುವಿಗೆಯಲ್ಲಿ ಲಕ್ಷ್ಮಣತೀರ್ಥ ನದಿಯ ದಡದಲ್ಲಿರುವ ಶ್ರೀ ರಾಮಲಿಂಗೇಶ್ವರಸ್ವಾಮಿ ಹಾಗೂ ರಾಮೇನಹಳ್ಳಿಯ ಓಂಕಾರೇಶ್ವರಸ್ವಾಮಿ ಮತ್ತು ಪಟ್ಟಣದ ಚಂದ್ರಮೌಳೇಶ್ವರ, ಶ್ರೀ ಕ್ಷೇತ್ರ ಗದ್ದಿಗೆಯ ಶ್ರೀ ಕೆಂಡಗಣ್ಣೇಶ್ವರಸ್ವಾಮಿ ಮತ್ತು ಮಹದೇಶ್ವರಸ್ವಾಮಿಯ ದೇವಾಲಯ ಸೇರಿದಂತೆ ತಾಲೂಕಿನ ವಿವಿಧೆಡೆ ಇರುವ ಶಿವನ ದೇವಾಲಯಗಳಲ್ಲಿ ಜಾಗರಣೆ, ಭಕ್ತಿಗೀತೆ, ಭಾವಗೀತೆ, ಹರಿಕಥೆ ಹಾಗೂ ಶಿವಲೀಲೆಯ ಕಥೆ ಪ್ರವಚನ ಮತ್ತು ಉತ್ಸವ, ಅಭಿಷೇಕ, ವಿಶೇಷ ಪೂಜೆಗಳು ಬುಧವಾರ ರಾತ್ರಿಯಿಂದಲೇ ಪ್ರಾರಂಭವಾಗಿ ಶುಕ್ರವಾರ ಬೆಳಗಿನ ಜಾವದ ತನಕ ನಡೆಯಲಿವೆ.