ದಾರ್ಶನಿಕರ ಕೊಡುಗೆ ಅಪಾರ: ಪ್ರೊ. ರಂಗಪ್ಪ
ಮೈಸೂರು: ನಾಡಿನ ವಿವಿಧ ದಾರ್ಶನಿಕರು ಸಮಾಜಕ್ಕೆ ಸಲ್ಲಿಸಿರುವ ಕೊಡುಗೆ ಅಪಾರ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ವಿವಿಯ ಲಲಿತ ಕಲಾ ಕಾಲೇಜು ವತಿಯಿಂದ ಮಾನಸಗಂಗೋತ್ರಿಯ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಪುರಂದರ- ತ್ಯಾಗರಾಜರ ಆರಾಧನೆ ಮತ್ತು ನಟರಾಜೋತ್ಸವ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಂದರದಾಸರು, ಕನಕದಾಸರು ಹಾಗೂ ತ್ಯಾಗರಾಜರು ಮುಂತಾದ ದಾರ್ಶನಿಕರು ಸಮಾಜದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದು, ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಇಂಥ ಕಾರ್ಯಕ್ರಮಗಲು ಯುವಜನತೆಗೆ ಪ್ರೇರಣೆಯಾಗಿವೆ ಎಂದರು.
ಪ್ರಾಂಶುಪಾಲೆ ಡಾ. ಆರ್. ಎನ್. ಶ್ರೀಲತಾ ಅವರು ನಟರಾಜ್ಯೋತ್ಸವದ ಉದ್ದೇಶಗಳನ್ನು ವಿವರಿಸಿದರು.
ನಂತರ ನಡೆದ ವಿಚಾರ ಸಂಕಿರಣದಲ್ಲಿ ಪಾಶ್ಚಾತ್ಯ ಸಂಗೀತ ರಚನಗಳು ಎಂಬ ವಿಷಯ ಕುರಿತು ಕ್ರಿಸ್ಟೋಫರ್ ಮತ್ತು ವೃಂದದವರು, ನಾಟಕ ಮತ್ತು ಕಲೆ ಎಂಬ ವಿಷಯ ಕುರಿತು ಮೈಸೂರು ವಿವಿಯ ಪ್ರಸಾರಾಂಗದ ನಿರ್ದೇಶಕ ಪ್ರೊ. ಸಿ. ನಾಗಣ್ಣ ಹಾಗೂ ಭರತನಾಟ್ಯದಲ್ಲಿ ಪಂಚರತ್ನ ಕೃತಿಗಳು ಎಂಬ ವಿಷಯ ಕುರಿತು ನಾಟ್ಯ ವಿದುಷಿ ನಂದಿನಿ ಈಶ್ವರ್ ಮಾತನಾಡಿದರು.
ನಂತರ ನಡೆದ ನಟರಾಜೋತ್ಸವದಲ್ಲಿ ವಿದ್ಯಾರ್ಥಿನಿಯರು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.