ನಾಳೆಯಿಂದ ವಿದ್ವತ್ ಅಂತರ್ ಕಾಲೇಜು ಉತ್ಸವ
ಮೈಸೂರು: ವಾಣಿಜ್ಯ ಹಾಗೂ ನಿರ್ವಹಣಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ವಿದ್ವತ್ ಅಂತರ್ ಕಾಲೇಜು ಉತ್ಸವವು ಫೆ. 28 ಮತ್ತು ಮಾ. 1ರಂದು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಇಂದಿನ ಬದಲಾದ ವ್ಯವಹಾರಿಕ ಯುಗದಲ್ಲಿ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತ್ರ ವಿದ್ಯಾರ್ಥಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಿದೆ. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಎದುರಿಸುವಲ್ಲಿ ಜ್ಞಾನ ವೃದ್ಧಿ ಮಾಡಲು ಈ ಉತ್ಸವವು ಸಹಕಾರಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಶಂಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ವಾಣಿಜ್ಯ ಹಾಗೂ ನಿರ್ವಹಣಶಾಸ್ತ್ರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವರು. ಫೆ. 28ರಂದು ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಉದ್ಘಾಟಿಸುವರು ಎಂದರು. ವಿದ್ವತ್ ಸಂಯೋಜನಾಧಿಕಾರಿ ಎಚ್.ಜೆ. ಚಂದ್ರಶೇಖರ್, ಸಂಚಾಲಕಿ ಪ್ರೊ. ಸುಜಾತ ಹಾಗೂ ವಿದ್ಯಾರ್ಥಿ ಮುಖಂಡರು ಇದ್ದರು.