ಮದ್ಯಪಾನ ಮಾಡುವ ಪೋಷಕರನ್ನು ವಿರೋಧಿಸಿ: ಜಯದೇವ್ ಸಲಹೆ
ಚಾಮರಾಜನಗರ: ಮಕ್ಕಳು ಮದ್ಯಪಾನ ಮಾಡುವ ಪೋಷಕರನ್ನು ವಿರೋಧಿಸಿದರೆ ಸುಂದರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ದೀನ ಬಂಧು ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ್ ಹೇಳಿದರು.
ನಗರದ ಆದರ್ಶ ವಿದ್ಯಾಲಯದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆ ಮತ್ತು ಆದರ್ಶ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಮದ್ಯಪಾನ ಮತ್ತು ಆರೋಗ್ಯ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರಣ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮದ್ಯಪಾನ ಕುಟುಂಬ ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಮನೆಯಲ್ಲಿ ಪೋಷಕರು ಮದ್ಯ ವ್ಯಸನಿಗಳಾದರೆ ಮಕ್ಕಳು ಅದನ್ನು ವಿರೋಧಿಸಬೇಕು. ಇಲ್ಲದಿದ್ದಲ್ಲಿ ಮದ್ಯಪಾನ ಮಕ್ಕಳ ಭವಿಷ್ಯ ವೃದ್ಧಿಸಲು ಬಿಡುವುದಿಲ್ಲ ಎಂದರು.
ವಿಶ್ವದಲ್ಲೇ ಭಾರತ ಮದ್ಯಪಾನ ಖರೀದಿಯಲ್ಲಿ 3ನೇ ಸ್ಥಾನದಲ್ಲಿದೆ. ವಿಶ್ವದ ದೊಡ್ಡ ದೊಡ್ಡ ಮದ್ಯಪಾನ ಉತ್ಪನ್ನ ಮಾಡುವ ಉದ್ಯಮಗಳು ಭಾರತದಿಂದ ಸಾಕಷ್ಟು ಹಣ ಸಂಪಾದಿಸಿಕೊಳ್ಳುತ್ತಿವೆ. ದೇಶದ ಪ್ರತಿಯೊಬ್ಬ ನಾಗರಿಕರು ಸಂಘಟಿತರಾಗಿ ಮದ್ಯಪಾನ ಉತ್ಪನ್ನ ಮಾಡುವ ಉದ್ಯಮಗಳನ್ನು ದೇಶದಿಂದ ಹೊರಹಾಕಲು ಮುಂದಾಗಬೇಕು ಎಂದು ಹೇಳಿದರು.
ಮದ್ಯಪಾನ ಮಾರಾಟದಿಂದ ಸರ್ಕಾರಕ್ಕೆ ಲಾಭಕ್ಕಿಂತ ಪರೋಕ್ಷವಾಗಿ ನಷ್ಟವೇ ಹೆಚ್ಚು. ಮದ್ಯಪಾನ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವೂ ಕುಂಠಿತಗೊಳಿಸುತ್ತದೆ. ಕುಡಿತ ಗರಗಸವಿದ್ದಂತೆ. ಕುಡಿಯುವಾಗಲೂ ಸಮಸ್ಯೆ, ಬಿಡುವಾಗಲೂ ಸಮಸ್ಯೆ. ಕುಡಿತಕ್ಕೆ ದಾಸರಾಗುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಕಟಿಸಿದ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ತಹಶೀಲ್ದಾರ್ ಮಹದೇವು, ಮದ್ಯಪಾನ ಹಾಗೂ ಇತರೆ ದುಶ್ಚಟಗಳಿಂದ ದೂರ ಉಳಿದು ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದರು.
ನಿಧಾನವಾಗಿ ಕೊಲ್ಲುವ ವಿಷಯ: ಮದ್ಯಪಾನ ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ವಿಷಯವಾಗಿದೆ. ಹದಿಹರೆಯದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಾಗಿ ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನದಿಂದ ಆರೋಗ್ಯದ ಮೇಲೆ ಯಾವುದೇ ಒಳ್ಳೆಯ ಪರಿಣಾಮ ಬೀರದು. ಮೊದಲು ಮನುಷ್ಯ ಮದ್ಯಪಾನವನ್ನು ಮುಗಿಸುತ್ತಾನೆ. ನಂತರ ಮದ್ಯಪಾನ ಮನುಷ್ಯನನ್ನೇ ಮುಗಿಸುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಮಲ್ಲಿಕಾ ಹೇಳಿದರು.
ಮದ್ಯಪಾನ ಹೊಟ್ಟೆ ಮತ್ತು ಸಣ್ಣ ಕರಳುಗಳ ಮೂಲಕ ನೇರವಾಗಿ ರಕ್ತ ಸಂಚಾರದಲ್ಲಿ ಸೇರಿಕೊಳ್ಳತ್ತದೆ. ಒಂದು ಬಾರಿ ಸೇರಿಕೊಂಡ ಮದ್ಯ ರಕ್ತನಾಳಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸಂಚರಿಸಿ ಆರೋಗ್ಯವನ್ನು ಕೆಡಿಸುತ್ತದೆ ಎಂದರು. ವಿಶ್ವದಲ್ಲೇ ಮದ್ಯಪಾನ ಮಾಡುವವರು 2 ಬಿಲಿಯನ್ ಜನರಿದ್ದಾರೆ. ಅದರಲ್ಲಿ 76.3 ಮಿಲಿಯನ್ ಜನರು ಮದ್ಯಪಾನ ಮಾಡುವುದರಿಂದ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು. ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮದ್ಯಪಾನದಿಂದಾಗುವ ಪರಿಣಾಮ ಕುರಿತು ಬಿಡಿಸಿದ್ದ ಚಿತ್ರಕಲೆ ಗಮನ ಸೆಳೆಯಿತು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ನಿಂಗೇಗೌಡ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.