ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾ. 2 ರಂದು ರಾಜ್ಯ ಉಪ್ಪಾರ ಸಮಾಜದ ಬೃಹತ್ ಸಮಾವೇಶ

Rashmi Kasaragodu
Updated On : 27 Feb 2014, 1:35 am

ಚಾಮರಾಜನಗರ: ಕರ್ನಾಟಕ ರಾಜ್ಯ ಉಪ್ಪಾರ ಸಂಘದ ವತಿಯಿಂದ ರಾಜ್ಯ ಮಟ್ಟದ ಉಪ್ಪಾರ ಸಮಾಜದ ಬೃಹತ್ ಸಮಾವೇಶ  ಮಾ. 2ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ  ತುಮಕೂರು ರಸ್ತೆಯಲ್ಲಿರುವ ಮಾದಾವರದ ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಮೈದಾನದಲ್ಲಿ  ನಡೆಯಲಿದೆ.
ಉಪ್ಪಾರ ಜನಾಂಗದ ಕುಲಗುರು ಪುರುಷೋತ್ತಮ ನಂದಪುರಿಸ್ವಾಮೀಜಿ ಸಾನಿಧ್ಯದಲ್ಲಿ ಸಮಾರಂಭವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು,
ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು,   ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಚಾಮರಾಜನಗರ ತಾಲೂಕು ಅಧ್ಯಕ್ಷ ಪಿ. ಲಿಂಗರಾಜು ಅವರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಉಪ್ಪಾರ ಸಮಾಜದ ಜನರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದಿದ್ದು ಉಪ್ಪಾರ ಸಮಾಜದ ಸರ್ವತೋಮುಖ ಅಭಿವೃದ್ದಿಗಾಗಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹಾಗೂ ಉಪ್ಪಾರ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ಗಮನ ಸೆಳೆಯುವ ದಿಕ್ಕಿನಲ್ಲಿ ರಾಜ್ಯದ ಉಪ್ಪಾರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಸಮಾವೇಶದಲ್ಲಿ ಉಪ್ಪಾರ ಸಮಾಜವನ್ನು ಎಸ್‌ಸಿ ಎಸ್‌ಟಿ ಪಂಗಡದ ಪಟ್ಟಿಗೆ ಸೇರಿಸಬೇಕು. ಉಪ್ಪಾರ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರ 50 ಕೋಟಿ  ರು ಮೀಸಲಿಡುವುದು.  ಬಸವಜಯಂತಿ, ವಾಲ್ಮಿಕಿ ಜಯಂತಿ, ಕನಕ ಜಯಂತಿ, ಅಂಬೇಡ್ತರ್ ಜಯಂತಿಯನ್ನು ಆಚರಿಸುತ್ತಿರುವ ರೀತಿ ಉಪ್ಪಾರ ಸಮುದಾಯದ ಭಗೀರಥ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು.
 ಬೆಂಗಳೂರಿನ ಭಗೀರಥ ಧಾರ್ಮಿಕ ಟ್ರಸ್ಟ್ ಆವರಣದಲ್ಲಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಿಸಲು 5ಕೋಟಿ ಅನುದಾನ ಮಂಜೂರು ಮಾಡುವುದು. ಮೈಸೂರಿನ ಸರಸ್ವತಿಪುರಂ ವಿದ್ಯಾರ್ಥಿನಿಯ ಹಾಗೂ ಬೆಂಗಳೂರಿನ  ಓಂಕಾರ ಆಶ್ರಮದ ವಿವಾದ ಬಗೆಹರಿಸಲು ಸರ್ಕಾರ ಮಧ್ಯ ಪ್ರವೇಶಿಸಿ ಉಪ್ಪಾರ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು. ಹೊಸದುರ್ಗದ ಭಗೀರಥ ಪೀಠ ಮಹಾಸಂಸ್ಥಾನದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರು. ಬಿಡುಗಡೆ ಮಾಡಬೇಕು. ಪ್ರವರ್ಗ 1ರ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಪಡೆಯಲು ವಿಧಿಸಿರುವ ಆದಾಯ ಮಿತಿಯನ್ನು ರದ್ದುಗೊಳಿಸಬೇಕು ಎಂಬ ಹಕ್ಕೋತ್ತಾಯಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಈ ವಿಚಾರವಾಗಿ ಪೂರ್ವ ನಿಗಧಿಯಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜನಾಂಗದ ಸಭೆ ನಡೆದಿದ್ದು, ಸಮಾವೇಶಕ್ಕೆ 3 ಲಕ್ಷಕ್ಕೂ ಹೆಚ್ಚು ಜನ ಸೇರುವಂತೆ ಜಿಲ್ಲೆಯ ಮತ್ತು ತಾಲೂಕಿನ ಕೇಂದ್ರಗಳಲ್ಲಿ ಜನಾಂಗದ ಮುಖಂಡರು, ಯಜಮಾನರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು ಸಭೆ ಸೇರಿ ರಾಜ್ಯದ ಮುಖಂಡರಿಗೆ ಮನವರಿಕೆ ಮಾಡಿ ಸಮಾರಂಭಕ್ಕೆ ಭಾಗವಹಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಹಾಗೂ ಚಾಮರಾಜನಗರ ತಾಲೂಕಿನಿಂದ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲು ತೀರ್ಮಾನಿಸಲಾಗಿದ್ದು ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement