ಖುರ್ಷಿದ್ ವಿರುದ್ಧ ನಮೋ ಬ್ರಿಗೇಡ್ ಪ್ರತಿಭಟನೆ
ಮೈಸೂರು: ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಪುಂಸಕ ಎಂದಿರುವುದನ್ನು ಖಂಡಿಸಿ ನಮೋ ಬ್ರಿಗೇಡ್ ಕಾರ್ಯಕರ್ತರು ನಗರದ ಗಾಂಧಿ ಚೌಕದಲ್ಲಿ ಗುರುವಾರ ಪ್ರತಿಭಟಿಸಿದರು.
ರಾಜಕಾರಣಿಗಳು ಪರಸ್ಪರ ಆರೋಪ ಮಾಡುವುದು ಸಹಜ. ಆದರೆ, ಆರೋಪ ಮಾಡುವಾಗ ಬಳಸುವ ಪದಗಳು ಯಾವ ಮಟ್ಟದ್ದು ಎಂಬುದರ ಬಗ್ಗೆ ಅರಿವು ಇರಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಲ್ಮಾನ್ ಖುರ್ಷಿದ್ ಅವರನ್ನು ನರೇಂದ್ರ ಮೋದಿ ಅವರನ್ನು ನಪುಂಸಕ ಎಂದಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಕಾಂಗ್ರೆಸ್ ಸಚಿವರಿಗೆ ತಮ್ಮ ಅಧಿಕಾರ ಕೊನೆಗೊಳ್ಳುತ್ತಿದೆ ಎಂಬ ಸತ್ಯ ತಿಳಿದಿದೆ. ಆದ ಕಾರಣ ಈ ರೀತಿ ಕೀಳು ಮಟ್ಟದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಇದು ಅವರ ಹತಾಶ ಮನೋಭಾವವನ್ನು ವ್ಯಕ್ತಪಡಿಸುತ್ತಿದೆ. ಖುರ್ಷಿದ್ ಅವರು ಈ ರೀತಿಯ ಪದ ಬಳಕೆ ಮಾಡಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.
ನಮೋ ಬ್ರಿಗೇಡ್ ಕಾರ್ಯಕರ್ತರಾದ ಸುಧೀರ್, ಚಿದಂಬರ್, ಅನಿಲ್, ಸತೀಶ್, ಧರ್ಮರಾಜ್, ದಯಾನಂದ್, ಹೊಯ್ಸಳ, ಹರೀಶ್ಬಾಬು, ಯಶವಂತ್, ಶ್ರೀರಾಮ್ ಇದ್ದರು.