ತ್ರೇತಾಯುಗದ ಶಿವಲಿಂಗಕ್ಕೆ ಪೂಜೆ, ಅಭಿಷೇಕ
ಜೆ. ಮಹದೇವ
ಮೈಸೂರು: ತ್ರೇತಾಯುಗದ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಮಹಾಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ಟಿ. ನರಸೀಪುರ ತಾಲೂಕಿನ ಗೇರ್ಗೇಶ್ವರಿ ಗ್ರಾಮದಲ್ಲಿ ಇಂದಿಗೂ ನಡೆದುಕೊಂಡು ಬಂದಿದೆ.
ಶ್ರೀ ಪ್ರಸನ್ನ ಪಾರ್ವತಿ ಸಮೇತ ಗಾರ್ಗೇಶ್ವರನೇಂದು ಹೆಸರು ಪಡೆದಿರುವ ಈ ಲಿಂಗ ಕಾವೇರಿ ತಟದಲ್ಲಿ ನೆಲೆಸಿದೆ. ಗಾರ್ಗೇಶ್ವರನ ನಾಮಬಲ ಅರಿತಿದ್ದ ಮುಸ್ಲಿಂ ರಾಜ ಬುಡಾನ್ಖಾನ್ ಸುಮಾರು 800 ವರ್ಷಗಳ ಹಿಂದೆ ದೇವಸ್ಥಾನ ಕಟ್ಟಿಸಿ, ಸಾಮರಸ್ಯ ಮೆರೆದಿದ್ದನು.
ಹೀಗಾಗಿ ಗರ್ಗೇಶ್ವರಿಯಲ್ಲಿ ಅತಿ ಹೆಚ್ಚು ಮುಸ್ಲಿಮರು, ಕಡಿಮೆ ಸಂಖ್ಯೆಯಲ್ಲಿ ಹಿಂದೂಗಳಿದ್ದರೂ ಈವರೆಗೂ ಯಾವುದೇ ಗಲಭೆಗಳು ನಡೆದಿಲ್ಲ. ಸಾಮರಸ್ಯ ಕದಡಿಲ್ಲ. ಎಲ್ಲರೂ ಸೌಹಾರ್ದಯುತವಾಗಿ ಬಾಳುತ್ತ ಉಭಯ ಧರ್ಮಗಳ ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಗಾರ್ಗೇಶ್ವರಸ್ವಾಮಿ ಇತಿಹಾಸ: ಗರ್ಗಾಚಾರ್ಯರು ಎಂಬ ಮುನಿಗಳು ಶ್ರೀಕೃಷ್ಣನಿಗೆ ಪಾಠ ಹೇಳುತ್ತಿದ್ದ ಗುರುಗಳು. ಒಮ್ಮೆ ಕೃಷ್ಣ ಗುರುಗಳಿಗೆ ಗೃಹಸ್ಥ ಧರ್ಮದ ವಿಷಯದಲ್ಲಿ ಪ್ರಶ್ನೆ ಹಾಕಿದಾಗ ಮುನಿಗಳಿಂದ ಉತ್ತರ ಬಾರದೆ, ಮಹಾ ಕೋಪದಿಂದ ಹಾಗೂ ತಪ: ಪ್ರಭಾವದಿಂದಲೂ ಗುರುವನ್ನು ನಿಂದಿಸಿದ್ದೀಯ. ನನ್ನ ಮಗನಿಂದ ನಿನ್ನನ್ನು ಹತ ಮಾಡುವ ತನಕ ಸುಮ್ಮನಿರಲಾರೆ ಎಂದು ಶಪಥ ಗೈದು ಉತ್ತರಕಾಶಿಯಿಂದ ದಕ್ಷಿಣಕಾಶಿಯತ್ತ ಬರುತ್ತಾರೆ.
ತಿರುಮಕೂಡಲಿನಲ್ಲಿ ತಪಸ್ಸು: ದಕ್ಷಿಣ ಕಾಶಿಯಲ್ಲಿ ತ್ರಿಮುಕುಟ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದ್ದ ತಿರುಮಕೂಡಲಿನಲ್ಲಿ (ಕಾವೇರಿ, ಕಪಿಲ, ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮ ಹರಿಯುವ ಪ್ರದೇಶ) ತಪಸ್ಸು ಕೈಗೊಳ್ಳುತ್ತಾರೆ.
ತಪಸ್ಸನ್ನು ಅರಿತು ಶ್ರೀಕೃಷ್ಣ ಗರ್ಗೇಶ್ವರಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಯವರನ ದಂಪತಿ ರೂಪದಲ್ಲಿ ಬಂದು ಗರ್ಗಾಚಾರ್ಯರಿಂದ ಪುತ್ರ ಸಂತಾನ ಪಡೆದು ಹೋಗುತ್ತಾನೆ. ಈ ವಿಷಯವು ಗರ್ಗಾಚಾರ್ಯರಿಗೆ ತಡವಾಗಿ ತಿಳಿದು ತಮ್ಮ ಶಪಥವನ್ನು ಶ್ರೀಕೃಷ್ಣ ಹಾಳು ಮಾಡಿದ ಎಂದು ಶಪಿಸಿಕೊಳ್ಳುತ್ತಾರೆ.
ಹಲವಾರು ವರ್ಷ ಕಳೆದ ನಂತರ ಪಾರ್ವತಿ ಪರಮೇಶ್ವರನು ಗರ್ಗಾಚಾರ್ಯರಿಗೆ ಪ್ರತ್ಯಕ್ಷವಾಗಿ ಶ್ರೀಕೃಷ್ಣನ ತಂತ್ರವನ್ನು ವಿವರಿಸುತ್ತಾರೆ. ಆಗ ಮುನಿಗಳು ತಮಗೆ ಮತ್ಯಾವ ವರವೂ ಬೇಡ, ತಮ್ಮ ಹೆಸರೇ ಈ ಕ್ಷೇತ್ರಕ್ಕೆ ಆವಿರ್ಭವಿಸಬೇಕು ಎಂದು ಕೇಳಿಕೊಳ್ಳುತ್ತಾರೆ.
ಹಾಗೆ ಮತ್ತೊಂದು ವರ ಕೇಳಿ ಪೂರ್ವವಾಹಿನಿಯಾಗಿ ಹರಿಯುವ ಕಾವೇರಿಯಲ್ಲಿ ಮೂರು ತೀರ್ಥಗಳು ಉದ್ಭವಿಸಿ, ಇಲ್ಲಿ ಸ್ನಾನ ಮಾಡಿದವರಿಗೆ ಶಾಪವಿಮೋಚನೆ, ಋಣ ವಿಮೋಚನೆಯಾಗಲಿ ಎಂದು ಮುನಿಗಳು ಕೇಳಿಕೊಳ್ಳುತ್ತಾರೆ. ಆಗ ಶಿವ ತಥಾಸ್ತು ಎಂದು ಹೇಳಿ ಮಾಯಾವಾಗುತ್ತಾನೆ ಎಂಬ ಪ್ರತೀತಿ ಇದೆ.
ಪ್ರತಿ ವರ್ಷವೂ ಬೆಳೆಯುತ್ತಿರುವ ಲಿಂಗ: ಪ್ರತಿ ವರ್ಷ ಭಕ್ತರು ಮಹಾಶಿವರಾತ್ರಿಯಂದು ಲಿಂಗ ದರ್ಶನ ಮಾಡಿ, ಜಾಗರಣೆ ಮಾಡಿ ದೇವತಾ ಕಾರ್ಯ ಕೈಗೊಳ್ಳುತ್ತಾರೆ. ಈ ರೀತಿ ಮಾಡಿದರೆ ಮುಕ್ತಿ ಹೊಂದಬಹುದು ಎಂಬ ನಂಬಿಕೆ ಜನರಲ್ಲಿದೆ. ಮೊದಲಿಗೆ ಸಾಸಿವೆ ಕಾಳಿನಷ್ಟು ಗಾತ್ರದಲ್ಲಿದ್ದ ಲಿಂಗ ಪ್ರತಿ ವರ್ಷವೂ ಬೆಳೆಯುತ್ತಿದೆ. ಆ ದೇವಸ್ಥಾನದಲ್ಲಿ ಎಂಟು ತಲೆಮಾರುಗಳಿಂದ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದಿರುವ ದೀಕ್ಷಿತ ಕುಟುಂಬಕ್ಕೆ ಸೇರಿದ ಜಿ.ಎ. ಶಿವರಾಮಕೃಷ್ಣರ ಪ್ರಕಾರ, ಲಿಂಗವು ಪ್ರತಿ ವರ್ಷ ಬತ್ತದ ಕಾಳಿನಷ್ಟು ಬೆಳೆಯುತ್ತಿದೆ. ಲಿಂಗಕ್ಕೆ ಬೆಳ್ಳಿಯ ವಿಭೂತಿ ಹಾಕುವಾಗ ನಮಗೆ ಗಾತ್ರ ಹಿಗ್ಗಿರುವುದು ಗೊತ್ತಾಗುತ್ತದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
ದೇವಸ್ಥಾನದ ಪ್ರತೀತಿಯನ್ನು ಮತ್ತಷ್ಟು ಪ್ರಚಾರಪಡಿಸುವ ನಿಟ್ಟಿನಲ್ಲಿ ಗಾರ್ಗೇಶ್ವರಸ್ವಾಮಿ ದೇವಸ್ಥಾನ ಶಿವರಾತ್ರಿ ಸೇವಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಶಿವರಾತ್ರಿ ದಿನದಂದು ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಸಮಿತಿಯಿಂದಲೇ ಕೈಗೊಳ್ಳಲಾಗುತ್ತದೆ.
ಅದರಂತೆ ಶಿವರಾತ್ರಿ ದಿನವಾದ ಗುರುವಾರ ಬೆಳಗ್ಗೆಯಿಂದ ದೇವರಿಗೆ ಅಭಿಷೇಕ, ಮಹಾವ್ಯಾಸ, ಮಹಾಗಣಪತಿ ಪೂಜೆ, ಪುರುಷಸೂಕ್ತ, 11 ಜನ ಆಗಮಿಕರು 11 ಬಾರಿ ಪಾರಾಯಣ ಮಾಡುವಂತೆ ರಾತ್ರಿಪೂರ ನಾಲ್ಕು ಬಾರಿ ಜಾಮೆ ಮಾಡಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೇವಸ್ಥಾನದ ಸುತ್ತ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಲಿದೆ.