ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನೆ ನಿರ್ಮಿಸದೇ ಬಿಲ್ ಗೋಲ್‌ಮಾಲ್

Rashmi Kasaragodu
Updated On : 28 Feb 2014, 1:16 am

ಅಂಶಿ ಪ್ರಸನ್ನಕುಮಾರ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ವ್ಯಾಪ್ತಿಯ ವರಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗದ ಆರು ಮನೆಗಳಿಗೆ 3.47 ಲಕ್ಷ ರು. ಅನುದಾನ ಬಿಡುಗಡೆ ಮಾಡಿ, ದುರುಪಯೋಗ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಪಂ ನೋಡಲ್ ಅಧಿಕಾರಿ ಸಿ.ಆರ್. ಸ್ವರಾಜ್ ದೇವನೂರು ಗ್ರಾಪಂ ವ್ಯಾಪ್ತಿಯ ವರಹಳ್ಳಿಯ ಗ್ರಾಪಂ ಸದಸ್ಯ ಎಂ. ನಾಗೇಂದ್ರ ಅವರೊಂದಿಗೆ ಬೇರೆ ಬೇರೆ ಮನೆಗಳ ಛಾಯಾಚಿತ್ರಗಳನ್ನು ಅಳವಡಿಸಿ, 3.47 ಲಕ್ಷ ರು. ಸಹಾಯಧನ ಬಿಡುಗಡೆ ಮಾಡಿಸಿ, ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರದಿ ನೀಡಿದ್ದಾರೆ.
ಈ ವರದಿ ಆಧಾರದ ಮೇಲೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್. ಮಹದೇವಪ್ರಸಾದ್ ಅವರು ಸಿ.ಆರ್. ಸ್ವರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ದೇವನೂರು ಗ್ರಾಪಂನವರು ಆನ್‌ಲೈನ್‌ನಲ್ಲಿ ಪ್ರಗತಿ ನಮೂದಿಸಿದ ಆಧಾರದ ಮೇಲೆ ನಾನು ವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಜಿಪಿಎಸ್ ಮಾಡಿರುತ್ತೇನೆ.
ಸ್ಥಳೀಯ ಗ್ರಾಪಂ ಸದಸ್ಯ ನಾಗೇಂದ್ರ ಅವರು  ಆರು ಮಂದಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಜಿಪಿಎಸ್ ಮಾಡಿಸಿದರು. ನನಗೆ ಒಟ್ಟು 4,471 ಮನೆಗಳ ಗುರಿ ಇದ್ದು, ಕೆಲಸದ ಒತ್ತಡ ಇದ್ದಿದ್ದರಿಂದ ಸರಿಯಾಗಿ ಪರಿಶೀಲಿಸಲಾಗದೇ ಗ್ರಾಪಂ ಸದಸ್ಯರು ತೋರಿಸಿದ ಮನೆಗಳ ಜಿಪಿಎಸ್ ಮಾಡಿದ್ದೇನೆ. ಆ ಸದಸ್ಯರು ನನ್ನ ದಿಕ್ಕು ತಪ್ಪಿಸಿ, ಆರು ಮಂದಿ ಫಲಾನುಭವಿಗಳಿಗೆ ಹಣ ಸಂದಾಯವಾಗುವಂತೆ ಮಾಡಿದ್ದಾರೆ. ನಾನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರವಹಿಸುತ್ತೇನೆ.
ಅಲ್ಲದೇ ಆ ಫಲಾನುಭವಿಗಳಿಗೆ ಹಣ ವಾಪಸ್ಮಾಡಿಸುತ್ತೇನೆ. ಆದ್ದರಿಂದ ತಮ್ಮ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಬಾರದು ಎಂದು ಸ್ವರೂಪ್ ನೋಟಿಸ್‌ಗೆ ನೀಡಿದ ಉತ್ತರದಲ್ಲಿ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿ, ವಿರೋಧಪಕ್ಷದ ನಾಯಕರಾಗಿದ್ದಾಗಲೇ ಈ ಪ್ರಕರಣ ನಡೆದಿತ್ತು. ಅವರಿಗೆ ವರಹಳ್ಳಿ ಗ್ರಾಮದ ಗುರುಸಿದ್ದಪ್ಪ, ಮಹದೇವಯ್ಯ, ಪಿ. ಬಸವಣ್ಣ, ನಾಗೇಂದ್ರ, ಶಿವನಾಗಪ್ಪ, ಎಸ್. ಸ್ವಾಮಿ, ನಟರಾಜು ಹಾಗೂ ಇತರರು ಈ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಸಿದ್ದರಾಮಯ್ಯ ನಂಜನಗೂಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದರು.
ತಾಪಂ ಯೋಜನಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಪಿಡಿಒ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರ್ ಮಾಡಿ, ವರದಿ ನೀಡಿದರು. ಅದರ ಪ್ರಕಾರ, ಗ್ರಾಪಂ ಸದಸ್ಯ ಎಂ. ನಾಗೇಂದ್ರ ಪತ್ನಿ  ಶಶಿಕಲಾ ಅವರಿಗೆ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದ್ದು, ಮನೆ ಕಟ್ಟದೇ ಬೇರೆ ಮನೆಗೆ ಜಿಪಿಎಸ್ ಮಾಡಿಸಿ, ಕಾನೂನುಬಾಹಿರವಾಗಿ ಬಿಲ್ ಪಡೆದುಕೊಂಡಿದ್ದಾರೆ.
ಅದೇ ರೀತಿ ಪುಟ್ಟಮಾದಮ್ಮ ಚಿಕ್ಕಮಾದಯ್ಯ, ಪುಟ್ಟಸಿದ್ದಮ್ಮ ಹನುಮಯ್ಯ, ಕೆಂಪದೇವಮ್ಮ ಶಿವಣ್ಣ, ದ್ರಾಕ್ಷಾಯಿಣಿ ರೇವಣ್ಣ, ಪಂಕಜಾ ಶಂಕರಾಚಾರಿ ಅವರು ಮನೆಗಳನ್ನು ಕಟ್ಟಿಕೊಳ್ಳದೇ ಬೇರೆ ಮನೆಗಳಿಗೆ ಜಿಪಿಎಶ್ ಮಾಡಿಸಿ, ಬಿಲ್ ಪಡೆದಿರುವುದು ಗೊತ್ತಾಗಿದೆ.
ಪಿಡಿಒ ಮನೆಗಳ ಪ್ರಗತಿಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದ ನಂತರ ವಸತಿ ನೋಡಲ್ ಅಧಿಕಾರಿ ಜಿಪಿಎಸ್ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಪಿಡಿಒ ಸ್ವಾಮಯ್ಯ ಪ್ರಗತಿ ವರದಿ ನಮೂದಿಸದಿದ್ದರೂ ಸ್ವರೂಪ್ ಸ್ವತ- ನಮೂದಿಸಿಕೊಂಡು ಆರು ಫಲಾನುಭವಿಗಳಿಗೆ ಬೇರೆಯವರ ಮನೆಗಳನ್ನು ಜಿಪಿಎಸ್ ಮಾಡುವ ಮೂಲಕ ಬಿಲ್ ಪಾವತಿಸಿರುವುದು ಕಂಡು ಬಂದಿದೆ. ಪಿಡಿಒ ಸ್ವಾಮಯ್ಯ ಅವರಿಗೆ ಈ ವಿಷಯ ಗೊತ್ತಿದ್ದರೂ ಮೇಲಾಧಿಕಾರಿಗಳಿಗೆ ತಿಳಿಸಿರಲಿಲ್ಲ.                                                      
ಯೋಜನಾಧಿಕಾರಿ ವರದಿಯ ಆಧಾರದ ಮೇಲೆ ತಾಪಂ ಇಒ ಅವರು ಸ್ವರಾಜ್‌ಗೆ ನೋಟಿಸ್ ಜಾರಿ ಮಾಡಿ, ಹಣ ಮರುಪಾವತಿಗೆ  ಕ್ರಮ ವಹಿಸುವಂತೆ ಸೂಚಿಸಿದರು.
ಮೇಲಾಧಿಕಾರಿಗಳಿಗೆ ವರದಿ: ಈ ಪ್ರಕರಣ ನಡೆದು, ಹಲವಾರು ತಿಂಗಳುಗಳು ಉರುಳಿವೆ. ಅಂದು ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಬಗ್ಗೆ ವರಹಳ್ಳಿಯ ವಿ.ಎಸ್. ನಾಗರಾಜು ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನಂಜನಗೂಡು ತಾಪಂ ಇಒ ಉತ್ತರ ನೀಡಿದ್ದಾರೆ. ಅದೇನೆಂದರೆ  ನೋಡಲ್ ಅಧಿಕಾರಿ ಸಿ.ಆರ್. ಸ್ವರಾಜ್ ಹಾಗೂ ಗ್ರಾಪಂ ಸದಸ್ಯ ನಾಗೇಂದ್ರ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement