ಹೆಗ್ಗೂರು ಮತ್ತಿತಾಳೇಶ್ವರ ರಥೋತ್ಸವ
ಬನ್ನೂರು: ಪುರಾಣ ಪ್ರಸಿದ್ಧ ಹೆಗ್ಗೂರು ಶ್ರೀ ಮತ್ತಿತಾಳೇಶ್ವರಸ್ವಾಮಿ ರಥೋತ್ಸವವು ಚಾಂದ್ರಸೌರ ಮಹಾಶಿವರಾತ್ರಿ ಅಂಗವಾಗಿ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ದೇಗುಲದ ಮುಂಭಾಗದಿಂದ ತಮಟೆ, ಮಂಗಳವಾದ್ಯ ನಾದದೊಂದಿಗೆ ಆರಂಭಗೊಂಡು ದೇವಸ್ಥಾನದ ಸುತ್ತ ಎಳೆಯಲಾಯಿತು. ರಥೋತ್ಸವದಲ್ಲಿ ಮೈಸೂರು, ಬನ್ನೂರು, ಮಂಡ್ಯ, ಮಳವಳ್ಳಿಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಭಾವದಿಂದ ದೇವರಿಗೆ ಜೈಕಾರ ಹಾಕುತ್ತಾ ರಥವನ್ನು ಎಳೆದರು. ನೂತನ ದಂಪತಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ರಥೋತ್ಸವಕ್ಕೆ ಹಣ್ಣು ಧವನ ಎಸೆದು ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ರಥೋತ್ಸವ ಮಧ್ಯಾಹ್ನ 12 ರಿಂದ 108ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಹದೇವಸ್ವಾಮಿ ಮತ್ತು ಆಗಮಿಕರಾದ ಕನ್ನಹಳ್ಳಿ ಮಹೇಶ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಬೆಳಿಗ್ಗೆ ರಥದ ಮೇಲೆ ಶ್ರೀ ಮತ್ತಿತಾಳೇಶ್ವರಸ್ವಾಮಿ ಪ್ರತಿಷ್‌ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ, ಭಕ್ತಾದಿಗಳು ರಥವನ್ನು ದೇವಾಲಯದಿಂದ ದೇವಾಲಯದ ಸುತ್ತ ಸಾಗಿ ಸ್ವಸ್ಥಾನಕ್ಕೆ ತಲುಪಿತು.ಮತ್ತಿತಾಳೇಶ್ವರಸ್ವಾಮಿ ಪ್ರಸಾದ ಸೇವಾ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿತ್ತು.