ಕೊಲೆ ಪ್ರಕರಣ: ಇಬ್ಬರಿಗೆ ಗಲ್ಲು ಶಿಕ್ಷೆ
ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದವರಿಗೆ ಒಂದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿಯ ಜಯಮ್ಮ ಮತ್ತು ಸೋಮಣ್ಣ ಶಿಕ್ಷೆಗೆ ಒಳಗಾದವರು. ಅನೈತಿಕ ಸಂಬಂಧ ಹೊಂದಿದ್ದ ವಿಷಯ ಪತಿಗೆ ತಿಳಿದ ಹಿನ್ನೆಲೆಯಲ್ಲಿ ಜಯಮ್ಮ ಮತ್ತು ಆಕೆಯ ಪ್ರಿಯಕರ ಸೋಮಣ್ಣ ಸೇರಿ ಜಯಮ್ಮನ ಪತಿ ತಿಮ್ಮಯ್ಯನನ್ನು ಕೊಲೆಗೈದು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಂಬಿಸಿದ್ದರು. ಈ ಸಂಬಂಧ ಬೀಚನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್. ರುದ್ರಮುನಿ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಿಚಿತ ಶವಗಳ ಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ. ಜೆ.ಕೆ. ಮೈದಾನದ ಶೌಚಾಗೃಹದ ಸಮೀಪ ಅಸ್ವಸ್ಥಗೊಂಡು ಮಲಗಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. 165 ಸೆ.ಮೀ. ಬೂದುಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು , ನೀಲಿ ಬಣ್ಣದ ಆಸ್ಪತ್ರೆ ಬಟ್ಟೆ ಧರಿಸಿದ್ದಾರೆ. ಅರಮನೆಯ ವರಹಾ ಗೇಟ್ ಬಳಿ ಭಿಕ್ಷೆ ಬೇಡಿ ಸಮೀಪದ ಬಸ್ ಶೆಲ್ಟರ್‌ನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬೂದು ಬಣ್ಣ, ದುಂಡು ಮುಖ ಇವರು ಬಿಳಿ ಮತ್ತು ನೀಲಿ ಬಣ್ಣದ ಚೌಕಳಿ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ.ಗುರುತು ಪತ್ತೆಯಾದಲ್ಲಿ ದೂ. 0821- 2418306 ಸಂಪರ್ಕಿಸಿ.