ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಮಕದ ವ್ಯಾಪ್ತಿ ಹಿಗ್ಗಿಸಲು ಹೊಸ ಪ್ರಯೋಗ ಅಗತ್ಯ

Rashmi Kasaragodu
Updated On : 1 Mar 2014, 12:37 pm

ಮೈಸೂರು: ಗಮಕ ಕ್ಷೇತ್ರದ ವ್ಯಾಪ್ತಿ ಹಿಗ್ಗಿಸಲು ಹೊಸ ಪ್ರಯೋಗಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಹೊಸತನ ಹುಡುಕುವ ಕೆಲಸ ನಡೆಯಬೇಕಿದೆ ಎಂದು ಸಂಶೋಧಕ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರೀ ಅಭಿಪ್ರಾಯಪಟ್ಟರು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಆಶ್ರಯದಲ್ಲಿ ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್ ಉದ್ಘಾಟಿಸಿ ಅವರು ಮಾತನಾಡಿದರು.
ಗಮಕಿಗಳಿಗೆ ಕೃತಿಗಳನ್ನು ಪುನರ್ ಸೃಷ್ಟಿ ಮಾಡುವ ಕಲೆ ಗೊತ್ತಿರಬೇಕು. ಕವಿಗೆ ಇರುವ ಗುಣಗಳು ಗಮಕಿಗಳಲ್ಲಿ ಇರಬೇಕು. ವ್ಯಾಖ್ಯಾನವು ಗಮಕಕ್ಕೆ ಪೂರಕವಾಗಿ ಬೆರೆತು ಹೃದಯಂಗಮವಾಗಿರಬೇಕು. ಪ್ರಾಚೀನ ಹಳಗನ್ನಡವನ್ನು ಮಕ್ಕಳಿಗೆ ಚೆನ್ನಾಗಿ ಕಲಿಸುವ ಅಗತ್ಯವಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಾದಿಯಾಗಿ ಸಂಘ-ಸಂಸ್ಥೆಗಳಲ್ಲಿ ಗಮಕವನ್ನು ಪ್ರಚುರಪಡಿಸಿ ಕಲಿಸಬೇಕು. ಆಗ ಇದರ ಉಳಿವು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ್ ಮಾತನಾಡಿ, ಗಮಕ ಕಲೆಗೆ ಮೈಸೂರು ತವರೂರಾಗಿದ್ದು, ಇಂದಿನ ದಿನಗಳಲ್ಲಿ ಗಮಕವನ್ನು ಹೆಚ್ಚು ಪ್ರಚುರಪಡಿಸುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್‌ಗೆ ರಚನೆಗೆ ಕಾರಣರಾದ ಜಿಲ್ಲಾ ಗಮಕ ಪ್ರತಿನಿಧಿ ಕೃ.ಪಾ. ಮಂಜುನಾಥ್ ಹಾಗೂ ಕೃ. ರಾಮಚಂದ್ರ ಅವರನ್ನು ಅಭಿನಂದಿಸಿದರು. ಜಿಲ್ಲಾ ಪರಿಷತ್‌ನ ಗೌರವಾಧ್ಯಕ್ಷ ಗಮಕಿ ಎಚ್.ಎಸ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೆಲ್ಲರ ಬಹುದಿನದ ಕನಸು ಎಲ್ಲರ ಸಹಕಾರದಿಂದ ನೆರವೇರಿದೆ. ಮುಂದಿನ ದಿನಗಳಲ್ಲಿ ಸೂಕ್ತ ಗಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿದುಷಿ ವಸಂತಾ ವೆಂಕಟೇಶ್, ವಿದುಷಿ ಶುಭಾ ರಾಘವೇಂದ್ರ, ಸುಮಾ ವಿಜಯ್, ಮೀನಾ ನಾಗರಾಜ್ ಗಮಕ ವಾಚಿಸಿದರು. ಎ. ನಿರಂಜನ್, ಮಂಜುಳಾ ನಾಗರಾಜ್ ಕಾವ್ಯ ನಿರೂಪಣೆ ಮಾಡಿದರು. ಕೃ.ಪಾ. ಮಂಜುನಾಥ್ ಸ್ವಾಗತಿಸಿದರು. ಕೆ. ವಿಜಯ್ ವಂದಿಸಿದರು. ವಿಮಲಶ್ರೀ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement