ನಂಜನಗೂಡು ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿಲ್ಲ
ನಂಜನಗೂಡು: ದಕ್ಷಿಣಕಾಶಿ ಎಂದೇ ಕರೆಸಿಕೊಳ್ಳುವ ನಂಜನಗೂಡು ಪಟ್ಟಣ, ನಿರೀಕ್ಷಿತ ಅಭಿವೃದ್ಧಿ ಕಾಣದೆ ಅವ್ಯವಸ್ಥೆಯ ಗೂಡಾಗಿದೆ ಎಂದು ಕ್ಷೇತ್ರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು. ಸುಮಾರು 6 ದಶಕಗಳ ಇತಿಹಾಸ ಹೊಂದಿರುವ ಪಟ್ಟಣ ಪುರಸಭಾ ಕಾರ್ಯಾಲಯ ನವೀಕೃತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ 1952 ರಲ್ಲಿ ಉದ್ಘಾಟನೆಗೊಂಡ ಪಾರಂಪರಿಕ ಕಟ್ಟಡ ಇದಾಗಿದ್ದು, 25 ಲಕ್ಷ ರು. ವೆಚ್ಚದಲ್ಲಿ ನವೀಕರಿಸಲಾಗಿದೆ. ಈ ಸುದೀರ್ಘ ಅವಧಿಯಲ್ಲಿ ಪಟ್ಟಣ ನಿವಾಸಿಗಳಿಗೆ ಹೆಚ್ಚಿನ ಸೌಲಭ್ಯ ದೊರೆಯದೆ ವಂಚಿತರಾಗಿದ್ದಾರೆ. ಒಳಚರಂಡಿ ಮತ್ತು ಕುಡಿಯುವ ನೀರಿನ ಸೌಲಭ್ಯ ದೊರೆಯದೆ ಜನರು ಪರಿತಪಿಸುತ್ತಿದ್ದಾರೆ. ಪುರಸಭೆಯ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸದಿರುವುದೆ ಇದಕ್ಕೆ ಕಾರಣ ಎಂದು ಹೇಳಿದರು.
ತಮ್ಮ ಜವಾಬ್ಧಾರಿ ಅರಿತು, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಸಭೆಗಳಲ್ಲಿ ಅಭಿವೃದ್ಧಿ ಪರವಾದ ಒಮ್ಮತದ ನಿರ್ಣಯ ಕೈಗೊಂಡು, ನಂಜನಗೂಡನ್ನು ಮಾದರಿ ಪಟ್ಟಣವನ್ನಾಗಿಸುವಲ್ಲಿ ಶ್ರಮಿಸುವಂತೆ ಪುರಸಭೆಯ ನೂತನ ಚುನಾಯಿತ ಜನಪ್ರತಿನಿದಿಗಳಿಗೆ ಕಿವಿಮಾತು ಹೇಳಿದರು.
ನಂಜನಗೂಡು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಹೊಂದಿದೆ, ದೇಬೂರು ಗ್ರಾಪಂಯು ಸೇರಿದಂತೆ ನಗರಸಭೆ ವ್ಯಾಪ್ತಿಯನ್ನು ವಿಸ್ತರಿಸುವ ವಿಚಾರ ಕುರಿತಂತೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಪ್ರಸಾದ್ ಅವರುತಿಳಿಸಿದರು.
ಕ್ಷೇತ್ರಕ್ಕೆ 200 ಕೋಟಿ ರು.ಗಳ ಯೋಜನೆ ರೂಪಿಸಲಾಗಿದೆ. ನಂಜನಗೂಡು ಪಟ್ಟಣಕ್ಕೆ 28 ಕೋಟಿ ರು. ಮತ್ತು ಹುಲ್ಲಹಳ್ಳಿ ಭಾಗದ 124 ಗ್ರಾಮಗಳಿಗೆ 92 ಕೋಟಿ ರು. ವೆಚ್ಚದಲ್ಲಿ 24್ಗ7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ತೀರ್ಮಾನ ಕೈಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆ ಪಡದಿದೆ. ಪಟ್ಟಣ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಎದುರಾಗಿದ್ದ ಅಡಿ ಆತಂಕಗಳು ನಿವಾರಣೆಯಾಗಿದೆ.
ರಾಜೀವ್ಗಾಂಧಿ ಹೌಸಿಂಗ್ ಕಾರ್ಪೋರೇಷನ್ ವತಿಯಿಂದ ಚಾಮರಾಜನಗರ ರಸ್ತೆಯಲ್ಲಿ ಬಡವರು ಅಸಹಾಯಕ ಕುಟುಂಬ ಗಳಿಗೆ 800 ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. 3.5 ಕೋಟಿ ರು. ವೆಚ್ಚದಲ್ಲಿ ಎಂಡಿಎ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳಲಾಗುವುದು, 57 ಲಕ್ಷ ರು. ಅಂದಾಜು ವೆಚ್ಚದಲ್ಲಿ ಶ್ರೀಕಂಠೇಶ್ವರ ದೇವಾಲಯದ ಹೊರ ಆವರಣದಲ್ಲಿ ಅಲ್ಲಿನ ರಸ್ತೆಬದಿ ವ್ಯಾಪಾರಿಗಳಿಗೆ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಪ್ರತಿಯೊಂದು ಸಮಾಜದವರಿಗೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಸಚಿವ ಪ್ರಸಾದ್ ಅವರ ಕಾಳಜಿಯಿಂದಾಗಿ ದಕ್ಷಿಣ ಕಾಶಿ ನಂಜನಗೂಡು ರಾಜ್ಯ ಭೂಪಟದಲ್ಲಿ ಹೆಚ್ಚಿನ ಮಹತ್ವ ಪಡೆದು, ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ರೂಪಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಪುರಸಭಾ ಮಾಜಿ ಅಧ್ಯಕ್ಷ ಎನ್.ಆರ್. ದೊರೆಸ್ವಾಮಿ, ಚಲುವರಾಜ್, ಎಂ. ಶ್ರೀಧರ್, ಅನುಸೂಯ ಗಣೇಶ, ಪಿ. ಶ್ರೀನಿವಾಸ್, ಎನ್. ಶ್ರೀನಿವಾಸ್ ಮತ್ತು ಗಾಯತ್ರಿ ಅವರನ್ನು ಸಚಿವರು ಸನ್ಮಾನಿಸಿ, ವಿಕಲಚೇತನರಿಗೆ ತ್ರಿಚಕ್ರವಾಹನಗಳನ್ನು ವಿತರಿಸಿದರು.
ಪುರಸಭೆ ಆಡಳಿತಾಧಿಕಾರಿ ಬಸರಾಜು, ಮುಖ್ಯಾಧಿಕಾರಿ ಡಿ. ರಮೇಶ್, ಸಮಾಜ ಸೇವಕ ಯು.ಎನ್. ಪದ್ಮನಾಭರಾವ್ ಮತ್ತು ನೂತನ ಪುರಸಭಾ ಸದಸ್ಯರು ಇದ್ದರು.