ನರ್ಮ್ ಬಳಕೆ: ಬಿಜೆಪಿ ಸರ್ಕಾರ ವಿಫಲ
ಕ.ಪ್ರ.ವಾರ್ತೆ ಮೈಸೂರು ಫೆ. 28
ಕೇಂದ್ರ ಸರ್ಕಾರ ನರ್ಮ್ ಯೋಜನೆಯಲ್ಲಿ ನಗರದ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ ಸರಿಪಡಿಸಲು ಸುಮಾರು 110 ಕೋಟಿ ರು.ಗಳನ್ನು ನೀಡಿದ್ದರೂ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂದು ಸಂಸದ ಎಚ್. ವಿಶ್ವನಾಥ್ ಆರೋಪಿಸಿದರು.
ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆರ್. ಅಶೋಕ್ ಅವರು ಕಿಕ್ ಬ್ಯಾಕ್ ಪಡೆದು,
ನಗರದ ಏಳು ಬಸ್ ನಿಲ್ದಾಣಗಳಲ್ಲಿ ಬೃಹತ್ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿರುವುದೇ ದೊಡ್ಡ ಸಾಧನೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಒಂದು ಇಡ್ಲಿಯ ಬೆಲೆ 25 ರು. ಹಾಗೂ ಒಂದು ಬಾಟಲಿ ನೀರಿಗೆ ಸುಮಾರು 30 ರು. ಹೀಗಾಗಿ ಬಸ್ ನಿಲ್ದಾಣ ಗ್ರಾಮೀಣ ಪ್ರಯಾಣಿಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಇಲವಾಲ, ಸಾತಗಳ್ಳಿ, ಕುವೆಂಪುನಗರ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರೇ ಹೋಗುತ್ತಿಲ್ಲ. ಪಾರಂಪರಿಕ ನಗರ ಮೈಸೂರಿನಲ್ಲಿ ಅದಕ್ಕೆ ಧಕ್ಕೆಯಾಗದಂತೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಿಲ್ಲ ಎಂದು ಹೇಳಿದರು.
ನರ್ಮ್ ಯೋಜನೆ ನಗರಕ್ಕೆ ವರದಾನವಾಗಿದ್ದರೂ, ಜನಸಾಮಾನ್ಯರು ಇಂತಹ ಯೋಜನೆ ಮೈಸೂರಿಗೆ ಏತಕ್ಕಾಗಿ ಬಂತು ಎಂದು ದಿನನಿತ್ಯ ಗೋಳಿಡುತ್ತಿರುವುದು ಇಂದಿನ ಸಹಜ ಸ್ಥಿತಿ. ಸಂಚಾರ ನಿಯಂತ್ರಣಕ್ಕೆ ಅಶೋಕ್ ಒಂದು ಬಿಡಿಗಾಸೂ ನೀಡಲಿಲ್ಲ. ಮೈಸೂರಿನ ವಾಹನಗಳ ಸಂಖ್ಯೆ ಜನಸಂಖ್ಯೆಯನ್ನು ಮೀರಿ ಬೆಳೆಯುತ್ತಿರುವುದರಿಂದ ನಗರದ ಸಂಚಾರ ವ್ಯವಸ್ಥೆ ಈಗಾಗಲೇ ಬೆಂಗಳೂರು ಮಾದರಿಯಾಗಿ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದಿನ ಜೆಡಿಎಸ್, ಬಿಜೆಪಿ ಹಾಗೂ ಬಿಜೆಪಿ ಸರ್ಕಾರಗಳು ನರ್ಮ್ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 1,864 ಕೋಟಿ ರು.ಗಳಲ್ಲಿ 1,200 ಕೋಟಿ ರು. ಮಾತ್ರ ಬಳಕೆಯಾಗಿದೆ. ಉಳಿದಿದ್ದು ವಾಪಸ್ ಹೋಗಿದೆ. ಕಾಮಗಾರಿಗಳು ಕೂಡಾ ಸರಿಯಾಗಿ ಆಗಿಲ್ಲ. ಪ್ರವಾಸೋದ್ಯಮಕ್ಕೆ ದೊರೆತ 40 ಕೋಟಿ ರು.ಗಳಲ್ಲಿ 16 ಕೋಟಿ ರು. ವೆಚ್ಚ ಮಾಡಿದ್ದರೂ ಪೂರ್ಣಗೊಳಿಸಿಲ್ಲ. ಕುಡಿಯುವ ನೀರಿಗೆ ಸಾಕಷ್ಟು ಹಣ ಕೊಟ್ಟರೂ ಜಸ್ಕೋ ಕಂಪನಿಗೆ ವಹಿಸಿ, ತೊಂದರೆ ಮಾಡಲಾಗಿದೆ.
ಕೇಂದ್ರದಿಂದ ಹಲವು ಯೋಜನೆ: ಈ ಭಾಗದ ಸಂಸತ್ ಸದಸ್ಯನಾಗಿ ಈ ಹಿಂದಿನ ಸರ್ಕಾರಕ್ಕೆ ಎಷ್ಟು ಬಾರಿ ಹೇಳಿದರೂ ನನ್ನ ಮಾತನ್ನು ಪರಿಗಣಿಸಲೇ ಇಲ್ಲ. ಇದರಿಂದ ನಗರದ ಮುಂದಿನ ಇಪ್ಪತ್ತು ವರ್ಷಗಳಿಗೆ ಸಂಚಾರ ವ್ಯವಸ್ಥೆಯನ್ನು ಸರಿಸುಮಾರಾಗಿ ಸರಿಪಡಿಸಲು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರನ್ನು ಕಳೆದ ಹದಿನೈದು ತಿಂಗಳುಗಳಿಂದ ನಿರಂತರವಾಗಿ ಭೇಟಿ ಮಾಡಿ ಒತ್ತಾಯಿಸಿದ ಪರಿಣಾಮವಾಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿಸಿದ ಆಸಕ್ತಿಯಿಂದಾಗಿ ಫೆ. 25 ರಂದು ಕೇಂದ್ರ ಸಚಿವಾಲಯ ನಗರದ ಸಂಚಾರಿ ವ್ಯವಸ್ಥೆಗೆ ಈ ಕೆಳಕಂಡ ಯೋಜನೆಗಳನ್ನು ಮಂಜೂರು ಮಾಡಿದೆ ಎಂದು ಅವರು ವಿವರಿಸಿದರು.
ಜೆಎಸ್ಎಸ್ - ನಂಜನಗೂಡು ರಸ್ತೆ ಮತ್ತು ವರ್ತುಲ ರಸ್ತೆ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ 27 ಕೋಟಿ ರು. ಮಂಜೂರು ಮಾಡಿದೆ. ಈಗಾಗಲೇ 5.4 ಕೋಟಿ ಮೊದಲನೆ ಕಂತಾಗಿ ಬಿಡುಗಡೆ ಮಾಡಿದೆ.
ಹುಣಸೂರು ರಸ್ತೆ- ವರ್ತುಲ ರಸ್ತೆ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ನಿರ್ಮಾಣ ಯೋಜನೆಗೆ 15.18 ಕೋಟಿ ಹಣವನ್ನು ಮಂಜೂರು ಮಾಡಿದೆ. ಮುಂಗಡವಾಗಿ 3.04 ಕೋಟಿ ಬಿಡುಗಡೆ ಮಾಡಲಾಗಿದೆ. ಪೂರ್ಣಗೊಳಿಸಬೇಕಾದ ಅವಧಿ 18 ತಿಂಗಳುಗಳು.
ಕೆಆರ್ಎಸ್ ರಸ್ತೆ ಮತ್ತು ವರ್ತುಲ ರಸ್ತೆ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ನಿರ್ಮಾಣದ ಯೋಜನೆಗೆ 9.83 ಕೋಟಿ ರು. ನೀಡಲಾಗಿದೆ. ಈಗಾಗಲೇ 1.96 ಕೋಟಿ ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ರಸ್ತೆ ಮತ್ತು ವರ್ತುಲ ರಸ್ತೆ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ ನಿರ್ಮಾಣ ಯೋಜನೆಗೆ 14.62 ಕೋಟಿ ರು. ನೀಡಲಾಗಿದೆ. ಈಗಾಗಲೇ 2.93 ಕೋಟಿ ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದ ಅವಧಿ 18 ತಿಂಗಳು.
ಮೈಸೂರು- ಬೆಂಗಳೂರು ಮಾರ್ಗ, ಮೈಸೂರು- ಅರಸೀಕೆರೆ ವರ್ತುಲ ರಸ್ತೆ ಮಾರ್ಗ, ಮೈಸೂರು- ನಂಜನಗೂಡು ವರ್ತುಲ ರಸ್ತೆ ಮಾರ್ಗ, ನೋಟು ಮುದ್ರಣ ನಗರದ ಹತ್ತಿರ ವರ್ತುಲ ರಸ್ತೆ ಮಾರ್ಗದಲ್ಲಿ ಬರುವಂತಹ ರೇಲ್ವೆ ಮೇಲ್ಸೇತುವೆ ವಿಸ್ತರಣೆಗೆ ಒಟ್ಟು 80 ಕೋಟಿ ರು. ನರ್ಮ್ ಯೋಜನೆಯಡಿ ನೀಡಲಾಗಿದೆ. ಮುಂಗಡವಾಗಿ 59.5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
4 ರಂದು ಕೇಂದ್ರ ಮಂಜೂರಾತಿ: ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿರುವ ಹೊಸ ಉಂಡುವಾಡಿ ಬಳಿಯಿಂದ ನಗರದ 30 ಹೊಸ ಬಡಾವಣೆಗಳಿಗೆ, ಮಾರ್ಗ ಮಧ್ಯದ 40 ಗ್ರಾಮಗಳಿಗೆ ನೀರು ಪೂರೈಸಲು 328 ಕೋಟಿ ರು. ಯೋಜನೆಗೆ ಕೇಂದ್ರ ಸರ್ಕಾರ ಮಾ.4 ರಂದು ಮಂಜೂರಾತಿ ನೀಡಲಿದೆ ಎಂದು ತಿಳಿಸಿದರು.
ರೈಲ್ವೆ ವೈದ್ಯಕೀಯ ಕಾಲೇಜು: ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದ್ಯೆತೆ ನೀಡಿದೆ. ರೈಲ್ವೆ ವೈದ್ಯಕೀಯ ಕಾಲೇಜಿನ ಆರಂಭಕ್ಕೂ ಗಮನಹರಿಸಲಾಗಿದೆ. ಕನಿಷ್ಠ 25 ಎಕರೆ ಇರಬೇಕು ಎಂಬ ನಿರ್ಬಂಧ ಸಡಿಲಿಸಲಾಗಿದೆ. 20 ಎಕರೆ ಒಳಗೆ ಜಾಗ ಇದ್ದರೂ ಸಾಕು. ರೈಲ್ವೆ ಇಲಾಖೆ ಬಳಿ 18 ಎಕರೆ ಜಾಗ ಇರುವುದರಿಂದ ವೈದ್ಯಕೀಯ ಕಾಲೇಜು ಆರಂಭವಾಗಲಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಎಂ. ಸತ್ಯನಾರಾಯಣ, ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಮಾಜಿ ಮೇಯರ್ ಅನಂತ, ಆರೀಫ್ ಹುಸೇನ್, ಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ, ಮುಖಂಡರಾದ ಕೋಟೆಹುಂಡಿ ಮಹದೇವ್, ಆರ್. ಪ್ರಕಾಶಕುಮಾರ್, ಎಚ್.ಎ. ವೆಂಕಟೇಶ್, ಶ್ರೀನಿವಾಸ್ ಮೊದಲಾದವರು ಇದ್ದರು.
ನರ್ಮ್ಗೆ ಪ್ರತ್ಯೇಕ ವಿಭಾಗ
ನರ್ಮ್ ಯೋಜನೆಯಲ್ಲಿ ಹಿಂದೆ ಆಗಿರುವ ಎಲ್ಲಾ ಲೋಪದೋಷ ಸರಿಪಡಿಸಲು ಮಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಮ್ಮತಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ವಿಭಾಗ ಕೂಡ ಆರಂಭವಾಗಲಿದೆ. ಲೋಪ ಎಸಗಿರುವವರ ವಿರುದ್ಧ ಕ್ರಮ ಕೂಡ ಆಗಬೇಕಿದೆ.