ಸಂಧಿವಾತ ರೋಗ: ಜಿರಾಫೆ ಚಾಮರಾಜ ಸಾವು
ಮೈಸೂರು: ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಜಿರಾಫೆ ಚಾಮರಾಜ (17) ಮೃತಪಟ್ಟಿದೆ. ಈ ಜಿರಾಫೆ ಎರಡು ವರ್ಷಗಳಿಂದ ಸಂಧಿವಾತ ಮತ್ತಿತರ ರೋಗದಿಂದ ಬಳಲುತ್ತಿತ್ತು. ಹನಿ ಮತ್ತು ಹೆನ್ರಿ ಎಂಬ ಜಿರಾಫೆಗಳ ಎರಡನೆ ಮರಿಯಾಗಿದ್ದ ಚಾಮರಾಜ ಮೃಗಾಲಯದ ಹಿರಿಯ ಜಿರಾಫೆಗಳಲ್ಲಿ ಒಂದಾಗಿತ್ತು. ಇದು ಖುಷಿ ಎಂಬ ಮತ್ತೊಂದು ಹೆಣ್ಣು ಜಿರಾಫೆಯೊಂದಿಗೆ ಸೇರಿ ಲಕ್ಷ್ಮಿ ಎಂಬ ಹೆಣ್ಣು ಜಿರಾಫೆಗೆ ಜನ್ಮ ನೀಡಿತ್ತು. 13 ದಿನಗಳ ಹಿಂದಷ್ಟೆ ಲಕ್ಷ್ಮಿ ಹೆಣ್ಣು ಮರಿಯೊಂದನ್ನು ಹಾಕಿತ್ತು. ಪ್ರಾಣಿ ಮೃತಪಟ್ಟ ಬಗ್ಗೆ ನೈಜ ಕಾರಣ ಅದರ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ನೋ ಪಾಲಿಟಿಕ್ಸ್ ಪ್ಲೀಸ್ ಅಂದ್ರು ವಿಶ್ವನಾಥ್
ಮೈಸೂರು: ಮಾಜಿ ಸಚಿವ, ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಇದ್ದ ಕಡೆ ರಾಜಕೀಯ. ಸ್ವಪಕ್ಷೀಯರಿರಲಿ, ಪ್ರತಿಪಕ್ಷದವರಿರಲಿ ಅವರ ಮೇಲೆ ಮಾತಿನ ಬಾಣ ಪ್ರಯೋಗಿಸುತ್ತಾರೆ. ಆದರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಪರೂಪಕ್ಕೆ ಎಂಬಂತೆ ಅಭಿವೃದ್ಧಿ ಮಂತ್ರ ಜಪಿಸಿದರು. ರಾಜಕೀಯದ ಬಗ್ಗೆ ಪ್ರಶ್ನೆ ಕೇಳಿದರೆ, ನೋ ಪಾಲಿಟಿಕ್ಸ್ ಪ್ಲೀಸ್ ಅಂದ್ರು. ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗ್ತಾರೆ ಅಂದ್ರು. ಆದ್ರೆ ಯಾರೂ ಬರ್ತಾ ಇಲ್ಲ ಎಂಬ ಬಗ್ಗೆ ಅವರ ಗಮನ ಸೆಳೆದಾಗ, ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳು. ಪ್ರಾದೇಶಿಕ ಪಕ್ಷಗಳಿಗೆ ಅಭ್ಯರ್ಥಿಗಳಿಲ್ಲ ಎಂದರೆ ಒಪ್ಪೋಣ. ಆದ್ರೆ ರಾಷ್ಟ್ರೀಯ ಪಕ್ಷಗಳಲ್ಲಿ ಆ ರೀತಿಯಾಗದು. ಒಬ್ಬರು ಮಾಜಿ ಸಿಎಂ, ಮತ್ತ್ತೊಬ್ಬರು ಇದೇ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿ. ಯಾರಾದ್ರು ಬರ್ಲಿ ಬಿಡಿ ಎಂದು ಸುದ್ದಿಗೋಷ್ಠಿ ಮುಗಿಸಿದರು.