ಸಮಾಜದ ಬೆಳವಣಿಗೆಗೆ ವಿದ್ಯೆ ಪೂರಕ
ಕ.ಪ್ರ.ವಾರ್ತೆ ಮೈಸೂರು ಫೆ. 28
ನಾವು ಪಡೆಯುವ ವಿದ್ಯೆ ಸಮಾಜದ ಬೆಳವಣಿಗೆಗೆ ಪೂರಕವಾಗಲಿ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಹಾಗೂ ನಿರ್ವಹಣಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಎರಡು ದಿನಗಳ ವಿದ್ವತ್ ಅಂತರ್ ಕಾಲೇಜು ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಕೇವಲ ಉದ್ಯೋಗ ಹೊಂದಿದರಷ್ಟೆ ಸಾಲದು. ಅದರಿಂದ ಉತ್ತಮ ಜೀವನ ರೂಪಿತವಾಗಬೇಕು. ಅದರ ಜತೆಗೆ ಸಮಾಜದ ಏಳಿಗೆಗೆ ಹಾಗೂ ಉತ್ತಮ ಪೀಳಿಗೆಯ ಜೀವನಕ್ಕೆ ಅದು ಪೂರಕವಾದರೆ ಮಾತ್ರ ವಿದ್ಯೆ ಆಶಯ ಸಾರ್ಥಕವಾಗಲಿದೆ ಎಂದರು.
ಇಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ತುಂಬ ಬೇಡಿಕೆ ಹಾಗೂ ಉತ್ತಮ ಅವಕಾಶಗಳಿವೆ. ನಾನು ಸಹ ವಾಣಿಜ್ಯ ವಿದ್ಯಾರ್ಥಿ. ಎಂಜಿನಿಯರ್ ಅಥವಾ ವೈದ್ಯಕೀಯ ಸೇರಲು ಅನೇಕರು ಸಲಹೆ ಮಾಡಿದ್ದರೂ ಸಹ, ನಾನು ವಾಣಿಜ್ಯ ಪದವಿ ಪಡೆದು ಐಪಿಎಸ್ ಮೂಲಕ ಈ ಇಲಾಖೆ ಸೇರಿದೆ. ನಾಯಕತ್ವ ಹಾಗೂ ಕೌಶಲವನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ನಮ್ಮಲ್ಲಿನ ವಿದ್ಯಾರ್ಥಿಗಳಿಗೆ ಶ್ರದ್ಧೆ ಹಾಗೂ ಜ್ಞಾನದ ಕೊರತೆಯಿಲ್ಲ. ಆದರೆ ಬೇರೆ ರಾಜ್ಯ ಅಥವಾ ದೇಶಕ್ಕೆ ಹೋಗಿ ತಮ್ಮ ಪ್ರತಿಭೆ ಮರೆಯಲು ಅಗತ್ಯವಾದ ಇಂಗ್ಲಿಷನ ಕೊರತೆಯಿದೆ. ಅದನ್ನು ನೀಗಿಸಿಕೊಂಡರೆ ಉತ್ತಮ ಯಶಸ್ಸು ಸಾಧಿಸಬಹುದು ಎಂದರು.
ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್ ಹಾಗೂ ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಮುಖ್ಯ ಅತಿಗಳಾಗಿದ್ದರು.
ವಿದ್ವತ್ ಸಂಚಾಲಕಿ ಪ್ರೊ. ಸುಜಾತಾ ಇದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಶಂಕರ್ ಪ್ರಾಸ್ತಾವಿಕ ಮಾತುಗಳಾಡಿದರು. ಸಂಯೋಜನಾಧಿಕಾರಿ ಎಚ್.ಜೆ. ಚಂದ್ರಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಭಾವನಾ ವಂದಿಸಿದರು.
ನಂತರ ನಡೆದ ಉತ್ಸವನದಲ್ಲಿ ಮಾನವ ಸಂಪನ್ಮೂಲದ ಬೆಳವಣಿಗೆ, ಮಾರುಕಟ್ಟೆ ಅಭಿವೃದ್ಧಿ ಹಾಗೂ ಬ್ಯಾಂಕಿಂಗ್ ಕಾರ್ಯ ನಿರ್ವಹಣೆ ಈ ಮುಂತಾದ ವಿಷಯಗಳನ್ನು ಕುರಿತು ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ ಸೇರಿದಂತೆ ವಿವಿಧ ಶೈಕ್ಷಣಿಕ ಸ್ಪರ್ಧೆಗಳು ನಡೆಯಿತು. ಜತೆಗೆ ಮನರಂಜನೆಗೆ ಪೂರಕವಾದ ನೃತ್ಯ, ಸಂಗೀತ ಹಾಗೂ ಗಾಯನ ಮತ್ತಿತರ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮೈಸೂರು ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ 22 ವಾಣಿಜ್ಯ ಹಾಗೂ ನಿರ್ವಹಣಶಾಸ್ತ್ರ ಕಾಲೇಜಿನ 250 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.