ಹೆಣ್ಣು ಮಕ್ಕಳ ಮಾರಾಟ ಜಾಲ ವಾಣಿಜ್ಯಕರಣ
ಮೈಸೂರು: ಹೆಣ್ಣು ಮಕ್ಕಳ ಮಾರಾಟ ಜಾಲ ಇಂದು ವಾಣಿಜ್ಯೀಕರಣಗೊಂಡಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಸಾಗಾಟ ತಡೆಗಟ್ಟುವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
20ನೇ ಶತಮಾನದ ಇಂದಿನ ದಿನದಲ್ಲಿಯೂ ಮಕ್ಕಳ ಮತ್ತು ಮಹಿಳಾ ಸಾಗಾಣಿಕೆ ಮುಂದುವರೆದಿದೆ. ವಸ್ತುವಿನಂತೆ ಹೆಣ್ಣು ಮಕ್ಕಳ ಮಾರಾಟ ದರ ಏರಿಕೆ ಆಗುತ್ತಿದೆ.
ಬಾಂಗ್ಲಾದೇಶದಿಂದ ಯುವತಿಯರು ಮತ್ತು ಮಕ್ಕಳನ್ನು ಜಿಲ್ಲೆಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಮಕ್ಕಳನ್ನು ಹಿಂದಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಇಂತಹ ಅಕ್ರಮದ ವಿರುದ್ಧ ಗ್ರಾಪಂ, ನಗರಸಭೆ ಮತ್ತು ಪಾಲಿಕೆ ಮಟ್ಟದಲ್ಲಿ ವ್ಯವಸ್ಥಿತ ಕಾರ್ಯಾಚರಣೆ ನಡೆಯಬೇಕಿದೆ. ಮಕ್ಕಳ ಮತ್ತು ಯುವತಿಯರ ಮಾರಾಟ ಅಪರಾಧ. ಮಕ್ಕಳನ್ನು ಸಾಕಲಾಗದ ಪೋಷಕರು ತಮ್ಮ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ನಡೆಸುವ ವಸತಿ ಶಾಲೆಗೆ ಒಪ್ಪಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಆರ್ಎಲ್ಎಚ್ಪಿ ಮಕ್ಕಳು ಬೀದಿ ನಾಟಕ ಪ್ರದರ್ಶಿಸಿ ಹೆಣ್ಣು ಮಕ್ಕಳ ಮಾರಾಟ ಕುರಿತು ಅರಿವು ಮೂಡಿಸಿದರು. ಡಿಡಿಪಿಐ ಎಚ್.ಆರ್. ಬಸಪ್ಪ, ಜಿಪಂ ಅಧ್ಯಕ್ಷ ಎಂ. ಮಹದೇವು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್, ಕಲಾವಿದ ಯೋಗಾನಂದ, ರೋಟರಿ ಸಂಸ್ಥೆಯ ಶಿವಲಿಂಗಸ್ವಾಮಿ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಆಶೋದಯ ಸಂಸ್ಥೆಯ ಪ್ರಣತಿ ಪ್ರಕಾಶ್ ಇದ್ದರು.