ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ನಗರದ ಸಿಸಿಬಿ ಘಟಕದ ಪೊಲೀಸರು ಬುಧವಾರ ಬಂಧಿಸಿ, ಒಟ್ಟು 2 ಲಕ್ಷ ಮೌಲ್ಯದ 6.5 ಕೆ.ಜಿ. ತೂಕದ ಗಾಂಜಾ, ನಗದು, ಮೊಬೈಲ್ ಮತ್ತು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ಯಾತಮಾರನಹಳ್ಳಿ ನಿವಾಸಿ ಲೇ. ಶೇಖ್ ಅಮೀರ್ ಎಂಬವರ ಪುತ್ರ ಅಫ್ರೋಜ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಈತನು ಅಜೀಜ್ ಸೇಠ್ ನಗರದ ಅಬು ಅಖಿಲ್ ಮಸೀದಿ ರಸ್ತೆಯ ಅಬ್ದುಲ್ ಬಷೀರ್ ಖಾನ್ ಕಾಂಪ್ಲೆಕ್ಸ್ ಮುಂಭಾಗ ದ್ವಿಚಕ್ರವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ವಶದಲ್ಲಿದ್ದ 4 ಕೆ.ಜಿ. ತೂಕದ ಗಾಂಜಾ ಹಾಗೂ ದ್ವಿಚಕ್ರವಾಹನ, ಮೊಬೈಲ್ ಹಾಗೂ 19,970 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಿಬ್ಬರು ಬಂಧನ: ಇದೇ ರೀತಿ ಬುಧವಾರ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಣೆ ಮದ್ರಾಸ್ ಕಡೆಯಿಂದ ಬರುವ ರಸ್ತೆ, ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ಬೈಕಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಶಾಗ್ಯಂ ಸಮೀದ ಪುಷ್ಪಾಪುರ ನಿವಾಸಿಗಳಾದ ಗುಳ್ಳಶೆಟ್ಟಿ ಎಂಬವರ ಪುತ್ರ ಜಿ.ಮಲ್ಲೇಶ್ ಮತ್ತು ಮಾದಶೆಟ್ಟಿ ಎಂಬವರ ಪುತ್ರ ಎಂ. ಶ್ರೀನಿವಾಸ ಅ. ಶಿವಪ್ಪ ಬಂಧಿತರು. ಇವರ ಬಳಿಯಿದ್ದ 2.5 ಕೆ.ಜಿ. ತೂಕದ ಗಾಂಜಾ, ಬೈಕ್, 2,870, ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ಎಂ.ಎಂ.ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ, ಇನ್ಸ್‌ಪೆಕ್ಟರ್‌ಗಳಾದ ಪಿ.ಎ. ಸೂರಜ್, ಆರ್. ಜಗದೀಶ್, ಎಸ್‌ಐ ಶ್ರೀನಿವಾಸಗೌಡ, ಎಎಸ್‌ಐಗಳಾದ ಎಂ.ಜೆ. ಜಯಶೀಲನ್, ಎಂ.ಡಿ. ಶಿವರಾಜು ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.