ಮುಜಾಫರ್ ನಿರಾಶ್ರಿತರಿಗೆ ಪರಿಹಾರ ನೀಡಲು ಆಗ್ರಹ
ಮೈಸೂರು: ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗಳ ನಿರಾಶ್ರಿತರಿಗೆ ಪರಿಹಾರ, ಪುನರ್ವಸತಿ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಸಿಪಿಎಂಎಲ್ ಮುಖಂಡರು ಮತ್ತು ಕಾರ್ಯಕರ್ತಕರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಮುಜಾಫರ್ನಗರದ ಪರಿಹಾರ ಶಿಬಿರಗಳಲ್ಲಿ ತೀವ್ರವಾದ ಚಳಿಯಿಂದ 40 ಮಕ್ಕಳು ಮೃತಪಟ್ಟಿದ್ದಾರೆ. ಅಲ್ಲಿ ನಡೆದಿರುವ ಅತ್ಯಾಚಾರದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನಿಖೆ ಕೈಗೊಂಡಿದೆ. ಆದರೆ, ಅಲ್ಲಿನ ಉತ್ತರಪ್ರದೇಶದ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.
ಎಫ್ಐಆರ್ನಲ್ಲಿ ದಾಖಲಾಗಿರುವ ಎಲ್ಲ ಗಲಭೆಕೋರರನ್ನು ಮತ್ತು ಅಚ್ಯಾಚಾರ ಮಾಡಿದ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕು. ಎಲ್ಲ ಗಲಭೆ ಸಂತ್ರಸ್ಥರಿಗೆ ಕೇಂದ್ರ ಸರ್ಕಾರವು ತಕ್ಷಣ ಪರಿಹಾರವಾಗಿ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿಪಿಎಂಎಲ್ ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಡಾ.ವಿ. ಲಕ್ಷ್ಮಿನಾರಾಯಣ, ಎನ್. ನಂಜೇಗೌಡ, ಶಬೀರ್ ಅಹಮ್ಮದ್, ಕುಮಾರ್, ರತಿರಾವ್, ರೂಪಾರಾವ್, ಅಯ್ಯಪ್ಪ ಹೂಗಾರ್, ಮುದ್ದಯ್ಯ ಇದ್ದರು.