ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಹೆ 212 ಅಭಿವೃದ್ಧಿಗೆ ಮಾರ್ಚ್‌ನಲ್ಲಿ ಚಾಲನೆ

Mainashree
Updated On : 2 Jan 2014, 10:55 am

ಮೈಸೂರು: ಮೈಸೂರು- ಗುಂಡ್ಲುಪೇಟೆ ಮತ್ತು ಮೈಸೂರು- ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಾರ್ಚ್ ತಿಂಗಳಲ್ಲಿ ಆರಂಭಿಸುವುದಾಗಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಲೋಕೋಪಯೋಗಿ, ಅರಣ್ಯ, ಕಂದಾಯ, ನೀರು ಸರಬರಾಜು, ವಿದ್ಯುತ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಟೆಂಡರ್ ಕರೆದು ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕಳೆದ ಡಿ.31 ರಂದು ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಕೇರಳ ಗಡಿಯಿಂದ ಕೊಳ್ಳೇಗಾಲವರೆಗಿನ ಈ ಕಾಮಗಾರಿಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
131.875 ಕಿ.ಮೀ ದೂರದ ಈ ಕಾಮಗಾರಿಯನ್ನು 489.29 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಸಿವಿಲ್ ಕಾಮಗಾರಿಗೆ 353.38 ಕೋಟಿ, ಪರಿಹಾರವಾಗಿ 65 ಕೋಟಿ ವೆಚ್ಚವಾಗಲಿದೆ. ಮೈಸೂರಿನಿಂದ ನಂಜನಗೂಡಿನವರೆಗೆ ನಾಲ್ಕು ಪಥದ ರಸ್ತೆ, ನಂಜನಗೂಡಿನಿಂದ ಗುಂಡ್ಲುಪೇಟೆವರೆಗೆ ದ್ವಿಪಥ ರಸ್ತೆ, ಗುಂಡ್ಲುಪೇಟೆ ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ, ಗುಂಡ್ಲುಪೇಟೆಯಿಂದ ಬಂಡೀಪುರ ಕಾಡಂಚಿನವರೆಗೆ ದ್ವಿಪಥ ರಸ್ತೆ, ಮೈಸೂರು ನಗರದಲ್ಲಿ ನಾಲ್ಕು ಪಥದ ರಸ್ತೆ, ಮೈಸೂರಿನಿಂದ ಕೊಳ್ಳೇಗಾಲದವರೆಗೆ ದ್ವಿಪಥದ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಯೋಜನೆಗೆ ಹೆಚ್ಚು ಗುತ್ತಿಗೆದಾರರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಇಪಿಸಿ ಮಾದರಿ ಅನುಸಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೈಸೂರು- ನಂಜನಗೂಡು ಮಾರ್ಗ ಮಧ್ಯದ ವಿಮಾನ ನಿಲ್ದಾಣದ ವಿಸ್ತರಣೆ ಸಧ್ಯಕ್ಕೆ ಇಲ್ಲವಾದ್ದರಿಂದ ಕಾಮಗಾರಿಯನ್ನು ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೆ ಆರಂಭಿಸಲಾಗುವುದು. ಅಲ್ಲದೆ ನಂಜನಗೂಡು ಬಳಿ 19 ಕೋಟಿ ವೆಚ್ಚದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವುದಾಗಿ ತಿಳಿಸಿದರು.
ಖಾಸಗಿ ಭೂಮಿಯೂ ಬೇಕು: ಈ ಕಾಮಗಾರಿ ಆರಂಭಿಸಲು ಸುಮಾರು 28.836 ಹೆಕ್ಟೇರ್‌ನಷ್ಟು ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳಬೇಕಿದೆ. 4.459 ಹೆಕ್ಟೇರ್ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಬೇಕು. ಅಲ್ಲದೆ ಮೈಸೂರು ಗುಂಡ್ಲುಪೇಟೆ ಮಾರ್ಗದಲ್ಲಿನ ವಿದ್ಯುತ್ ಕಂಬಗಳು, ನೀರು ಸರಬರಾಜು ಪೈಪ್‌ಗಳನ್ನು ಸ್ಥಳಾಂತರಿಸಬೇಕು. ಈ ಮಾರ್ಗವಾಗಿ ನಂಜನಗೂಡು, ಟಿ. ನರಸೀಪುರ ಮತ್ತು ಗುಂಡ್ಲುಪೇಟೆಗೆ ನೀರು ಪೂರೈಕೆ ಆಗುತ್ತದೆ. ಅಲ್ಲದೆ ರಸ್ತೆ ವಿಸ್ತರಣೆ ವೇಳೆ 2667 ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮತ್ತು ಸಂಸದ ಆರ್. ಧ್ರುವನಾರಾಯಣ್ ಅವರು ಅಧಿಕಾರಿಗಳಿಗೆ ಕೆಲವು ಸಲಹೆ ನೀಡಿ, ಜ.16 ಅಥವಾ 17 ರಂದು ಮತ್ತೊಮ್ಮೆ ಅಧಿಕಾರಿಗಳ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ: ಶಿರಾಡಿಘಾಟ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 95 ಕೋಟಿ ನೀಡಿದೆ. ಜಪಾನ್ ತಂತ್ರಜ್ಞಾನ ಬಳಸಿ ಇಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದರ ಜೊತೆಗೆ ಮಂಗಳೂರು ಮತ್ತು ಚೆನ್ನೈ (ಬಂದರು ನಗರ) ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ರಾಜ್ಯದ 3500 ಕಿ.ಮೀ. ರಸ್ತೆಯನ್ನು 1300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೆ ಚಾಲನೆ ನೀಡಿದ್ದಾರೆ. ಇದರ ಜೊತೆಗೆ 4 ಸಾವಿರ ಕಿ.ಮೀ. ರಾಜ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.
ಶಾಸಕ ಎಚ್.ಪಿ. ಮಂಜುನಾಥ್, ಜಿಲ್ಲಾಧಿಕಾರಿ ಸಿ. ಶಿಖಾ, ಲೋಕೋಪಯೋಗಿ ಇಲಾಖೆ ಮೃತ್ಯುಂಜಯಸ್ವಾಮಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement