ಅತಿಕ್ರಮ ಆರೋಪಗಳೆಲ್ಲ ಸುಳ್ಳು
ಕ.ಪ್ರ.ವಾರ್ತೆ ಕೆ.ಆರ್. ನಗರ ಜ.3
ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ನನ್ನ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ವೇ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವುದು ಅಕ್ರಮ ಎಂದು ಸುಳ್ಳು ಆರೋಪ ಮಾಡುತ್ತಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕುನ್ನೇಗೌಡ ಸಮುದಾಯ ಭವನದ ಮಾಲೀಕ ನರೇಂದ್ರಬಾಬು ಹೇಳಿದರು.
ಸುಮಾರು 50 ವರ್ಷಗಳ ಹಿಂದೆ ನನ್ನ ತಾತ ಕುನ್ನೇಗೌಡ ರೈಸ್‌ಮಿಲ್ ನಿರ್ಮಿಸಲು ಈ ಜಾಗದ ಪೂರ್ವ-ಪಶ್ಚಿಮವಾಗಿ 307 ಅಡಿಗಳು, ಉತ್ತರ-ದಕ್ಷಿಣ 122 ಅಡಿಗಳನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಸಿಕೊಳ್ಳಲಾಯಿತು. ರೈಸ್‌ಮಿಲ್ ನಿರ್ಮಿಸಿದ ನಂತರ ಉಳಿಕೆ 5 ಗುಂಟೆ ಜಾಗವನ್ನು ಉತ್ತರ ದಿಕ್ಕಿಗೆ ಉಳಿಸಿಕೊಂಡಿದ್ದು, ಈಗ ಈ ಜಾಗವು ನನ್ನ ಪತ್ನಿ ಪೂರ್ಣಿಮಾ ಹೆಸರಿನಲ್ಲಿ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ನಿಯ ಹೆಸರಿನಲ್ಲಿ ಪುರಸಭೆಯಿಂದ ವೇ ಬ್ರಿಡ್ಜ್ ನಿರ್ಮಾಣ ಮಾಡಲು ಉದ್ದಿಮೆಯ ಅಧಿಕೃತ ಪರವಾನಗಿಯನ್ನು 2013ರ ಫೆ.9 ರಂದು ಪಡೆದು ವೇ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದ್ದರೂ ಪಟ್ಟಣದ ಕೆಲವು ಉದ್ದಿಮೆಗಳ ಪ್ರಭಾವಕ್ಕೆ ಒಳಗಾಗಿ ರಾಜಕೀಯ ಪ್ರೇರಿತದಿಂದ ಎಪಿಎಂಸಿ ಆಡಳಿತ ಮಂಡಳಿ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದು ದೂರಿದರು.
ನನ್ನ ಆಸ್ತಿ ಪುರಸಭೆ ಖಾತೆ ನಂ 120/110ರ ವಿಸ್ತೀರ್ಣ 122್ಢ307 ಆಗಿದ್ದು, ಯಾವುದೇ ರೀತಿಯಲ್ಲೂ ಎಪಿಎಂಸಿ ಜಾಗವನ್ನು ಒತ್ತುವರಿ ಮಾಡಿಲ್ಲ. ನನ್ನ ನಿವೇಶನದ ಉತ್ತರ ದಿಕ್ಕಿನಲ್ಲಿರುವ ಎಪಿಎಂಸಿಗೆ ಹೋಗುವ ರಸ್ತೆಯು ಪುರಸಭೆ ಖಾತೆ ನಂ 12/111 ನನ್ನ ಚಿಕ್ಕಪ್ಪ ರಾಮಚಂದ್ರ ಹೆಸರಿನಲ್ಲಿದ್ದು, ಈ ಜಾಗವು ನ್ಯಾಯಾಲಯದಲ್ಲಿದೆ ಎಂದು ಮಾಹಿತಿ ನೀಡಿದರು.
ನನ್ನ ಕುಟುಂಬದವರು ಎಪಿಎಂಸಿಗಾಗಿ ಸುಮಾರು 24 ಎಕರೆ ಜಮೀನನ್ನು ಕಡಿಮೆ ಮೊತ್ತಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ನೀಡಿದ್ದು, ನಮಗೆ ಈಗ ಒತ್ತುವರಿ ಮಾಡುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಒತ್ತುವರಿ ಮಾಡದೇ ನನ್ನ ಜಾಗದಲ್ಲಿ ಕಾನೂನಿನ ಪ್ರಕಾರ ಪರವಾನಗಿ ಪಡೆದು ವೇ ಬ್ರಿಡ್ಜ್ ಮಾಡುತ್ತಿರುವುದಕ್ಕೆ ಅಡ್ಡಿಪಡಿಸುತ್ತಿರುವುದು ಅಲ್ಲದೇ, ಸುಳ್ಳು ಆರೋಪ ಮಾಡಿ ನನಗೆ ಮಾನಸಿಕ ಹಿಂಸೆ ನೀಡಿ ಮಾನಹಾನಿ ಮಾಡಿರುವ ಎಪಿಎಂಸಿ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರು ಮಾಧ್ಯಮದ ಮೂಲಕ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದರು.
ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲಾತಿ ಬಿಡುಗಡೆ ಮಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿಯವರು ದಾಖಲೆಗಳಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಲಿ. ನಾನು ಅತಿಕ್ರಮ ಮಾಡಿರುವುದು ಸಾಬೀತಾದರೆ ಯಾವುದೆ ಶಿಕ್ಷೆಗೂ ಸಿದ್ದನಿದ್ದು, ವೇ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವ ಜಾಗವನ್ನು ತೆರವು ಮಾಡಲು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು. ನರೇಂದ್ರ ಬಾಬು ಪತ್ನಿ ಪೂರ್ಣಿಮಾ ನರೇಂದ್ರ ಬಾಬು ಇದ್ದರು.