ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಟೋ ರಿಕ್ಷಾ ಸಂಚಾರ ಸ್ತಬ್ಧ

Mainashree
Updated On : 3 Jan 2014, 11:16 am

ಕ.ಪ್ರ.ವಾರ್ತೆ  ಮೈಸೂರು  ಜ. 3
ಆಟೋ ಗ್ಯಾಸ್ ದರ ಮತ್ತು ಗ್ರಾಹಕರ ಅಡುಗೆ ಅನಿಲ ಬೆಲೆ ಏರಿಕೆಯ ವಿರುದ್ಧದ ಹೋರಾಟ ತೀವ್ರಗೊಂಡಿದ್ದು, ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ನಗರದಾದ್ಯಂತ ಆಟೋ ರಿಕ್ಷಾ ಬಂದ್‌ಗೆ ಕರೆ ನೀಡಲಾಗಿದೆ.
ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಯಾವುದೆ ಆಟೋ ಸಂಚಾರ ಇರುವುದಿಲ್ಲ. ಕೇಂದ್ರ ಸರ್ಕಾರ ದಿಢೀರನೆ ಪ್ರತಿ ಲೀಟರ್‌ಗೆ 11.10 ಹೆಚ್ಚಳ ಮಾಡಿರುವುದು ಸರಿಯಲ್ಲ.
ಇದರಿಂದ ಚಾಲಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಆಟೋ ಬಂದ್‌ಗೆ ಕರೆ ನೀಡಲಾಗಿದ್ದು, ಯಾವುದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಆಟೋ ಕಾರ್ಯಾಚರಣೆ ನಡೆಸುವುದಿಲ್ಲ. ಒಂದು ವೇಳೆ ಯಾರಾದರೂ ಆಟೋ ಬಳಸಿದರೆ ಅದರಿಂದಾಗುವ ಗಲಭೆಗೆ ನಾವು ಜವಾಬ್ದಾರರಲ್ಲ ಎಂದು ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ ಎಚ್ಚರಿಸಿದೆ.
ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶುಕ್ರವಾರ ಸಭೆ ನಡೆಸಿದ ಆಟೋ ಚಾಲಕರು ಸರ್ಕಾರ ಕೂಡಲೇ ಆಟೋ ಚಾಲಕರ ಅಭಿವೃದ್ಧಿ ನಿಗಮ ರಚಿಸಬೇಕು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಾದ ರಾಜೀವ್ ಗಾಂಧಿ ಮತ್ತು ನರ್ಮ್ ಯೋಜನೆಯಡಿ ಆಟೋ ಚಾಲಕರಿಗೆ ನಿವೇಶನ ನೀಡಬೇಕು, ಹಿಂದುಳಿದ ವರ್ಗ, ಪ.ಜಾತಿ, ಪ.ಪಂಗಡ ಮಂಡಳಿಯಿಂದ ನೇರ ಯೋಜನೆಗಳ ಅಡಿ ಆಟೋ ಚಾಲಕರಿಗೆ ಸಾಲ ನೀಡಬೇಕು, ಮೀಟರ್ ಅಳವಡಿಸಲು ಸರ್ಕಾರದಿಂದ ಸಂಪೂರ್ಣ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
ಪಿಂಚಣಿ ನೀಡಬೇಕು: 60 ವರ್ಷ ಮೀರಿದ ಆಟೋ ಚಾಲಕರಿಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯ ನೀಡಬೇಕು. ಹಳೆ ಆಟೋ ಬದಲಿಸಿ, ಹೊಸ ಆಟೋ ಖರೀದಿಸುವವರಿಗೆ ಹಾಲಿ ನೀಡುತ್ತಿರುವ ಸಬ್ಸಿಡಿ ಹಣವನ್ನು 15 ಸಾವಿರದಿಂದ 30 ಸಾವಿರವರೆಗೆ ಹೆಚ್ಚಿಸಬೇಕು, ರಾಜ್ಯ ಸರ್ಕಾರ ಆಟೋ ಚಾಲಕರ ಎಲ್‌ಪಿಜಿ ಗ್ಯಾಸ್‌ಗೆ ಸೆಸ್ ಕಡಿಮೆ ಮಾಡಬೇಕು. ಹಾಲಿ ಇರುವ ಕನಿಷ್ಠ ದರವನ್ನು 20 ರಿಂದ 30ಗೆ ಮತ್ತು ಪ್ರತಿ ಕಿ.ಮೀ.ಗೆ 11 ನಿಂದ 15ಗೆ ಹೆಚ್ಚಿಸಲು ಜಿಲ್ಲಾಧಿಕಾರಿ ನೇತೃತ್ವದ ಆರ್‌ಟಿಎ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಎಡ್ವಿನ್ ವಿಲ್ಸನ್ ವೆಸ್ಲಿ ಮತ್ತು ಕಾರ್ಯದರ್ಶಿ ಬಿ.ಟಿ. ರಾಜ ಸಭೆಯ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement