ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆವಿಷ್ಕಾರಗಳು ಜನ ಸಾಮಾನ್ಯರಿಗೂ ತಿಳಿಯಲಿ

Mainashree
Updated On : 3 Jan 2014, 11:15 am

ಮೈಸೂರು: ಪ್ರಸಕ್ತ ಸಾಲಿನ ದಶಕವನ್ನು ಆವಿಷ್ಕಾರದ ದಶಕ ಎಂದು ಗುರುತಿಸಲಾಗಿದೆ ಎಂದು ನ್ಯಾಕ್‌ನ ಮಾಜಿ ನಿರ್ದೇಶಕ ಪ್ರೊ.ಎಚ್.ಎ. ರಂಗನಾಥ್ ಹೇಳಿದರು.
ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ವಿಜ್ಞಾನ ಕಾಂಗ್ರೆಸ್ ಬೆಂಗಳೂರು ಘಟಕ ಮತ್ತು ಮೈಸೂರು ವಿವಿ ಭೂವಿಜ್ಞಾನ ಅಧ್ಯಯನ ವಿಭಾಗ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಹೊಸ ಆವಿಷ್ಕಾರಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
2010- 2020ನೇ ಈ ದಶಕವನ್ನು ಆವಿಷ್ಕಾರದ ದಶಕ ಎಂದು ಕರೆಯಲಾಗುತ್ತಿದೆ. ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅನೇಕ ವಿಷಯಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ಆವಿಷ್ಕಾರ ಎಂಬುದು ಅಭಿವೃದ್ಧಿಗೆ ಪೂರಕವಾಗಿದೆ. ನಾವು ಕೇವಲ ಆವಿಷ್ಕಾರಗಳನ್ನು ಮಾಡಿದರೆ ಸಾಲದು. ಅದು ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.
ವಿವಿಗಳು ಕಾಣಿಕೆ ನೀಡಲಿ: ವಿಶ್ವವಿದ್ಯಾಲಯಗಳು ಎಲ್ಲಾ ವಿಷಯಗಳಲ್ಲೂ ಆವಿಷ್ಕಾರ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಕಾಣಿಕೆ ನೀಡಬೇಕು. ಈ ಮುಂಚೆ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಮಾತ್ರ ಚಾಲ್ತಿಯಲ್ಲಿತ್ತು. ಈಗ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ನೀತಿಯೂ ಸೇರಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ನಿವೃತ್ತ ಪ್ರಧಾನ ಕಾರ್ಯದರ್ಶಿ ಪ್ರೊ.ಅಶೋಕ್‌ಕುಮಾರ್ ಸಕ್ಸೇನಾ ಮಾತನಾಡಿ, ಹಿಂದೆ ಆವಿಷ್ಕಾರಗಳಾಗುವುದು ಜನರಿಗೆ ತಲುಪುತ್ತಿರಲಿಲ್ಲ. ಆದರೆ ಈಗ ನಾವು ಮಾಡಿದ ಆವಿಷ್ಕಾರಗಳು ಸಾರ್ವಜನಿಕರಿಗೆ ತಲುಪುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದರು.
ಜಿನೊಮ್ ಸೆಂಟರ್ ಜಾಲತಾಣ ಉದ್ಘಾಟಿಸಿದ ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಈ ಜಾಲ ತಾಣವು ವಿಶ್ವದ ನಾಲ್ಕನೆ ಮತ್ತು ಭಾರತದ ಮೊದಲ ಜಾಲ ತಾಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ವಿಜಯಲಕ್ಷ್ಮೀ ಸಕ್ಸೇನಾ, ಪ್ರೊ.ವಿ.ಎ. ವಿಜಯನ್, ಪ್ರೊ. ಶಿವಜ್ಞಾನಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement