ಇನ್ನೂ 4 ರೈಲು ಸಂಚಾರ
ಕ.ಪ್ರ.ವಾರ್ತೆ ಮೈಸೂರು ಜ. 3
ಮೈಸೂರಿನಿಂದ ಸದ್ಯದಲ್ಲಿಯೇ ಇನ್ನೂ ನಾಲ್ಕು ಹೆಚ್ಚುವರಿ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಈವರೆಗೆ ಮೈಸೂರು ರೇಲ್ವೆ ವಿಭಾಗೀಯ ವ್ಯವಸ್ಥಾಪಕರಾಗಿದ್ದು, ಈಗ ದೆಹಲಿಯ ರೇಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ವರ್ಗವಾಗಿರುವ ವಿನೋದ್ಕುಮಾರ್ ಅವರು ಶುಕ್ರವಾರ ನೂತನ ಡಿಆರ್ಎಂ ರಾಜ್ಕುಮಾರ್ ಲಾಲ್ ಅವರಿಗೆ ಅಧಿಕಾರ ವಹಿಸಿಕೊಟ್ಟ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಉದ್ಯಾನ್ ಎಕ್ಸ್ಪ್ರೆಸ್, ತಾಳಗುಪ್ಪಗೆ ರಾತ್ರಿ ರೈಲು, ವಾರಣಾಸಿ ರೈಲು, ಸ್ವರ್ಣಜಯಂತಿ ಎಕ್ಸ್ಪ್ರೆಸ್ ಹೆಚ್ಚುವರಿ ಸಂಚಾರ- ಈ ಬಗ್ಗೆ ರೇಲ್ವೆ ಮಂತ್ರಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.
ನಗರದ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ 18 ಬೋಗಿಗಳ ರೈಲು ನಿಲುಗಡೆಯಾಗುವಂತೆ ಫ್ಲಾಟ್ಫಾರಂ ವಿಸ್ತರಿಸಿರುವುದರಿಂದ ಚಾಮರಾಜನಗರ- ತಿರುಪತಿ ರೈಲು ಅಲ್ಲಿಯೂ ನಿಲುಗಡೆಯಾಗಲಿದೆ. ಚಾಮರಾಜನಗರದಲ್ಲಿ ರೇಕ್ ಪಾಯಿಂಟ್ ಕೂಡ ಬರಲಿದೆ ಎಂದು ಹೇಳಿದರು.
ಮೈಸೂರು ನಿಲ್ದಾಣದಲ್ಲಿ ಹೆಚ್ಚಿನ ರೈಲುಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಅಶೋಕಪುರಂ ನಿಲ್ದಾಣದಲ್ಲಿ ಜಾಗವಿಲ್ಲ. ಹೀಗಾಗಿ ಭವಿಷ್ಯದಲ್ಲಿ ಬೆಳಗೊಳದಲ್ಲಿ ಮತ್ತೊಂದು ಟರ್ಮಿನಲ್ ಮಾಡಲಾಗುವುದು. ಬೆಂಗಳೂರಿನ ವಿವಿಧ ಭಾಗಗಳಿಂದ ರೈಲುಗಳು ಹೊರಡುವಂತೆ ಕೆಲವೊಂದು ರೈಲುಗಳ ಬೆಳಗೊಳದಿಂದಲೂ ಹೊರಡಲಿವೆ ಎಂದರು.
ಬೇರೆ ಕಡೆ ಅನೇಕ ಸೌಲಭ್ಯ: ಮುಂದಿನ ಆರು ತಿಂಗಳಲ್ಲಿ ಅರಸೀಕೆರೆಯಲ್ಲಿ ಫುಡ್ ಪ್ಲಾಜಾ, ಹಾಸನದಲ್ಲಿ ಫಾಸ್ಟ್ ಫುಡ್ ಘಟಕ, 14 ನಿಲ್ದಾಣಗಳಲ್ಲಿ ಜನಸಾಧಾರಣ್ ಟಿಕೆಟ್ ಬುಕ್ಕಿಂಗ್ ಸೇವಕರ ನೇಮಕ, ಮೈಸೂರು, ದಾವಣಗೆರೆ, ಶಿವಮೂಗ್ಗ ನಿಲ್ದಾಣಗಳಲ್ಲಿ ಇಂಟರ್ನೆಟ್ ಕೆಫೆ, ಕಬಕ ಪುತ್ತೂರು ಹಾಗೂ ಹಾವೇರಿ ರೇಲ್ವೆ ನಿಲ್ದಾಣಗಳಲ್ಲಿ ಮಾದರಿ ನಿಲ್ದಾಣದ ಉನ್ನತೀಕರಿಸಿದ ಸೌಲಭ್ಯ, ಮೈಸೂರು ನಿಲ್ದಾಣದಲ್ಲಿ ಎರಡು ಎಸ್ಕಲೇಟರ್ಗಳು ಮತ್ತು ಲಿಫ್ಟ್ಗಳು, ಎಲ್ಲಾ ಫ್ಲಾಟ್ಪಾರಂಗಳಿಗೆ ತೆರಳಲು ಸಬ್ ವೇ ನಿರ್ಮಾಣ, 9 ಕಡೆ ಎಟಿಎಂಗಳು, ಮೈಸೂರು ನಿಲ್ದಾಣದ ವಾಹನ ನಿಲುಗಡೆ ಗುತ್ತಿಗೆ ಆಖೈರು, 18 ಹೊಸ ಕೇಟರಿಂಗ್ ಘಟಕಗಳು, ಸುಬ್ರಹ್ಮಣ್ಯ ರಸ್ತೆಯಲ್ಲಿ ಭಕ್ತಾದಿಗಳಿಗೆ ಸ್ನಾನಗೃಹ ವ್ಯವಸ್ಥೆ, ಮೈಸೂರು ನಿಲ್ದಾಣದಲ್ಲಿ ಸಮಗ್ರ ಭದ್ರತಾ ವ್ಯವಸ್ಥೆ, ಸ್ಫೋಟಕ ವಸ್ತುಗಳ ಸಾಗಣೆ ವಿರುದ್ಧ ಕ್ರಮ, ಮೈಸೂರು ಸೇರಿದಂತೆ 8 ಕಡೆ ಸಮಗ್ರ ಯಾಂತ್ರೀಕೃತ ಸ್ವಚ್ಛತಾ ವ್ಯವಸ್ಥೆ, ಮಾನವರಹಿತ ರೇಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ಸುರಕ್ಷಿತವಾಗಿ ಹಳಿ ದಾಟುವ ಕುರಿತು ಚಲನಚಿತ್ರ ಮಂದಿರ ಹಾಗೂ ಎಫ್ಎಂಗಳಲ್ಲಿ ಪ್ರಸಾರ, ಲೆವೆಲ್ ಕ್ರಾಸಿಂಗ್ ಗೇಟ್ಗಳಲ್ಲಿ 75 ಸೋಲಾರ್ ದೀಪ ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.
ಈಗಾಗಲೇ ಮೈಸೂರು, ದಾವಣಗೆರೆಯಲ್ಲಿ ಫುಡ್ ಪ್ಲಾಜಾ, ಪೇ ಆ್ಯಂಡ್ ಯೂಸ್ ಶೌಚಾಲಯ, ಎರಡನೇ ಪ್ರವೇಶ ದ್ವಾರ ಆರಂಭಿಸಲಾಗಿದೆ. ಮೈಸೂರು ನಿಲ್ದಾಣದಲ್ಲಿ ಸ್ನೇಹಿತರು ಹಾಗೂ ಬಂಧುಗಳನ್ನು ಬರಮಾಡಿಕೊಳ್ಳುವ ಸ್ಥಳ ನಿಗದಿ ಮಾಡಿ, ಫ್ಲಾಟ್ಫಾರಂಗಳಲ್ಲಿ ದಟ್ಟಣೆ ಕಡಿಮೆ ಮಾಡಲಾಗಿದೆ. ಅತ್ಯಾಧುನಿಕ ಸಂಜ್ಞಾಫಲಕ ಹಾಕಲಾಗಿದೆ. 49 ಲಕ್ಷ ವೆಚ್ಚದಲ್ಲಿ ಫ್ಲಾಟ್ ಫಾರಂಗಳಲ್ಲಿ ಉತ್ತಮ ಕುರ್ಚಿಗಳನ್ನು ಹಾಕಲಾಗಿದೆ. ಟಿಕೆಟ್ರಹಿತ ಪ್ರಯಾಣಿಕರ ಪತ್ತೆಗೆ ಕ್ರಮವಹಿಸಲಾಗಿದೆ. ಮೈಸೂರಿನಿಂದ ಹಂಪಿ, ಬಾಗಲಕೋಟೆ, ಸೋಲಾಪುರ್ಗೆ ನೇರ ರೈಲು ಸಂಚಾರ ಆರಂಭಿಸಲಾಗಿದೆ ಎಂದು ಹೇಳಿದರು.
ಮೈಸೂರು ವಿಭಾಗದಲ್ಲಿ 544 ಲೆವಲ್ ಕ್ರಾಸಿಂಗ್ಗಳಿದ್ದು, ಈ ಪೈಕಿ 278 ಮಾನವರಹಿತ ಕ್ರಾಸಿಂಗ್ಗಳು. ಇವುಗಳ ಸಂಖ್ಯೆಯನ್ನು ಕಡಿತ ಮಾಡಲು ಕ್ರಮವಹಿಸಲಾಗಿದೆ. ರೇಲ್ವೆ ನಿಲ್ದಾಣ, ಅಧಿಕಾರಿಗಳು ಹಾಗೂ ನೌಕರರ ವಸತಿಗೃಹಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ. ಮುಂದೆ ಅಗತ್ಯವಿರುವ ಕಡೆ ಅಳವಡಿಸಲಾಗುವುದು ಎಂದ ವಿನೋದ್ಕುಮಾರ್, ತಮ್ಮ ಅಧಿಕಾರವಧಿ ತಮಗೆ ತೃಪ್ತಿ ತಂದಿದೆ. ಮೈಸೂರು ನಿಲ್ದಾಣದಲ್ಲಿ ಪ್ರವಾಸೋದ್ಯಮ ಪ್ರಶಸ್ತಿ ಕೂಡ ಬಂದಿದೆ ಎಂದು ಹೇಳಿದರು.
ವಿನೋದಕುಮಾರ್ ಹಾಕಿರುವ ಮಾರ್ಗದಲ್ಲಿ ಮುನ್ನಡೆಯುವುದಲ್ಲದೇ ಅಗತ್ಯವಿರುವ ನೂತನ ಕ್ರಮಗಳನ್ನು ಕೈಗೊಳ್ಳುವುದಾಗಿ ನೂತನ ಡಿಆರ್ಎಂ ರಾಜಕುಮಾರ್ ಲಾಲ್ ಹೇಳಿದರು.
ಕಾರ್ಟ್ ನಿರ್ದೇಶಕ ಯು.ಎನ್. ರವಿಕುಮಾರ್, ನಂಜನಗೂಡು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರ್ ತಮ್ಮ ಅನುಭವಗಳನ್ನು ಹಂಚಿಕೊಂಡರು.