ಗೋ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಮಿತ್ತಲ್
ಮೈಸೂರು: ಸುಮಾರು 50 ಲಕ್ಷಕ್ಕೂ ಹೆಚ್ಚು ಗೋವುಗಳನ್ನು ವಧಾ ಸ್ಥಾನಕ್ಕೆ ಸಾಗಾಣಿಕೆ ಮಾಡಿ ಸುಮಾರು 3000 ಕೋಟಿ ವ್ಯವಹಾರ ನಡೆಸುತ್ತಿದ್ದರೂ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿಯುಳ್ಳ ವರದಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಗೋ ಸೇವಾ ಆಯೋಗ್ ಸದಸ್ಯ ಡಾ.ಎಸ್.ಕೆ. ಮಿತ್ತಲ್ ತಿಳಿಸಿದ್ದಾರೆ.
ಹಸುವಿನ ತಳಿಗಳಾದ ಅಮೃತ್ ಮಹಲ್, ದೇವಾನಿ, ಕಾಗ್ಯಂಹಲ್ದಿಕರ್, ಕೃಷ್ಣವಲ್ಲಿ, ಮಲ್ನಾಡ್ ಗಿಡ್ಡ, ಕಿಲ್ಲರ್ ಹೆಸರಿನ ಗೋವುಗಳು ವಧಾ ಸ್ಥಾನಕ್ಕೆ ಬಲಿಯಾಗಿವೆ. ಇಲ್ಲಿನ ಗೋವುಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸೋತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಪಿಎಂಸಿ ಯಾರ್ಡ್ಗಳಿಂದ ಹಸು, ಕರು, ಎಮ್ಮೆಗಳನ್ನು ಖರೀದಿ ಮಾಡಿ ಕೇರಳ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಿಂದ ರೈತರಿಗೆ ಕೃಷಿ ಚಟುವಟಿಕೆಯು ದುಬಾರಿಯಾಗಿ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದರು.
ಪಶುಸಂಗೋಪನಾ ಇಲಾಖೆಯಿಂದ ಪ್ರಾಣಿಗಳ ಆರೋಗ್ಯದ ಬಗ್ಗೆ ದೃಢೀಕರಣ ಪತ್ರ ನೀಡಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರ್ಟಿಒ ಅಧಿಕಾರಿಗಳು ತೀವ್ರತರವಾಗಿ ತಪಾಸಣೆ ನಡೆಸಬೇಕು. ನಗರಪಾಲಿಕೆಗಳು ಅಕ್ರಮ ವಧಾಸ್ಥಾನಗಳನ್ನು ಪತ್ತೆಹಚ್ಚುವುದು, ಅದನ್ನು ನಡೆಸುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.