ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಯಶ್ರೀ, ವೀರಣ್ಣ ದಂಡೆಗೆ ಶಿವರಾತ್ರೀಶ್ವರ ಪ್ರಶಸ್ತಿ ಪ್ರದಾನ

Mainashree
Updated On : 3 Jan 2014, 11:15 am

ಮೈಸೂರು: ಲೇಖಕರಾದ ಜಯಶ್ರೀ ದಂಡೆ ಮತ್ತು ಡಾ.ವೀರಣ್ಣ ದಂಡೆ ದಂಪತಿಗೆ 2012ನೇ ಸಾಲಿನ ಶಿವರಾತ್ರೀಶ್ವರ ಪ್ರಶಸ್ತಿ ನೀಡಿ ಶುಕ್ರವಾರ ಗೌರವಿಸಲಾಯಿತು.
ಜೆಎಸ್‌ಎಸ್ ವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ರಾಜೇಂದ್ರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗುಲ್ಬರ್ಗ ವಿವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ವೀರಣ್ಣ ದಂಡೆ ಹಾಗೂ ಅದೇ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಕನ್ನಡ ಪ್ರಾಧ್ಯಾಪಕಿ ಡಾ.ಜಯಶ್ರೀ ದಂಡೆ ಅವರಿಗೆ ಪ್ರಶಸ್ತಿ ಫಲಕ ಹಾಗೂ 25 ಸಾವಿರ ನಗದು ನೀಡಿ, ಸನ್ಮಾನಿಸಿದರು.
ಲೇಖಕರ 12ನೇ ಶತಮಾನದ ಶರಣ ಸ್ಮಾರಕಗಳು ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ದಂಡೆ, ಜನಪದ ಕ್ಷೇತ್ರ ಕಾರ್ಯ ಮಾಡಿ ಅನುಭವ ಇದ್ದುದರಿಂದ ಶರಣ ಸ್ಮಾರಕಗಳ ಮಾಹಿತಿ ಸಂಗ್ರಹ ಕೆಲಸ ಸುಲಭವಾಯಿತು. ಉತ್ತರ ಕರ್ನಾಟಕದ 91 ಹಳ್ಳಿಗಳಲ್ಲಿ ನಾನು ಮತ್ತು ನನ್ನ ಪತ್ನಿ ಜಯಶ್ರೀ ತಿರುಗಾಡಿ 3 ವರ್ಷಗಳ ಅವಧಿಯಲ್ಲಿ 190 ಸ್ಮಾರಕಗಳ ಕಲೆಹಾಕಿ ಈ ಕೃತಿ ರಚಿಸಿದ್ದೇವೆ. ಇದು ಮಾಹಿತಿ ಪುಸ್ತಕ ಮಾತ್ರವಲ್ಲ ಸಂಶೋಧನ ಗ್ರಂಥ ಎಂದರು.
ಕೃತಿ ಕುರಿತು ಮಾತನಾಡಿದ ಲೇಖಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಬಸವಕಲ್ಯಾಣ ಕೇಂದ್ರೀಕರಿಸಿ ಈ ಕೃತಿ ರಚಿಸಲಾಗಿದ್ದು, 12ನೇ ಶತಮಾನದ ಶರಣರ ಸ್ಮಾರಕಗಳನ್ನು ವಾಸ್ತವ ಸ್ಥಿತಿಗತಿಯಲ್ಲಿ ಬಿಂಬಿಸಿದ್ದಾರೆ. ಬದುಕಿನ ಸಹಜ ಅಂಶಗಳ ಜತೆಗೆ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಸಾಮರಸ್ಯ ಸಂಗತಿಗಳು ಅನಾವರಣಗೊಂಡಿರುವುದು ವಿಶೇಷತೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಕೆ.ಸಿ. ಶಿವಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement