ನಮ್ ಗೋಳು ಕೇಳೋರ್ಯಾರು
ಸಾಲಿಗ್ರಾಮ: ಭವಿಷ್ಯದ ಪ್ರಜೆಗಳನ್ನು ರೂಪಿಸಲು ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹತ್ತಾರು ಶೈಕ್ಷಣಿಕ ಯೋಜನೆಗಳನ್ನು ರೂಪಿಸುತ್ತಿದ್ದರೂ ಅದನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ಸೋತಿದೆ ಎಂಬುದಕ್ಕೆ ಇಲ್ಲೊಂದು ಸೂಕ್ತ ಉದಾಹರಣೆ ಇದೆ.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯವು ಸರಿಯಾದ ನಿರ್ವಹಣೆ ಇಲ್ಲದೆ ದುಸ್ಥಿತಿಯಲ್ಲಿದೆ. ವಿದ್ಯಾರ್ಥಿನಿಲಯವು ಸ್ವಂತ ಕಟ್ಟಡವಿಲ್ಲದೇ ಹಳೆಯ ಮನೆಯಲ್ಲಿ ಬಾಡಿಗೆಗೆ ಪಟ್ಟಣದಲ್ಲಿ ನಡೆಯುತ್ತಿದೆ. ಈ ನಿಲಯದಲ್ಲಿ ಐಟಿಐ, ಡಿಪ್ಲೋಮಾ, ಪಿಯುಸಿ ಹಾಗೂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 75 ಜನ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಪ್ರತ್ಯೇಕವಾಗಿ ಓದುವ ಮತ್ತು ಮಲಗುವ ಕೊಠಡಿಗಳಿಲ್ಲ. ಕಿರಿದಾಗಿರುವ 4 ಕೊಠಡಿಗಳಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಮಲಗಲು ಸ್ಥಳಾವಕಾಶವಿದೆ. ಉಳಿದವರಿಗೆ ಬಯಲು ಪ್ರದೇಶದ ರೀತಿಯಲ್ಲಿ ಒಂದೇ ಆವರಣ ಹೊಂದಿರುವ ನಿಲಯವಾಗಿದೆ. ಆದರೆ ಆ ಬಯಲು ಪ್ರದೇಶದಲ್ಲಿ ವಿದ್ಯಾರ್ಥಿಗಳು ಮಲಗದೇ ಕೇವಲ ಊಟಕ್ಕಾಗಿ ಹಾಸ್ಟೆಲ್ ಅನ್ನು ಬಳಸಿಕೊಂಡು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಮನೆಯನ್ನು ಪಡೆದು ವಾಸ ಮಾಡುತ್ತಿದ್ದಾರೆ.
ಮೂಲ ಸೌಲಭ್ಯ ಕೊರತೆ: ಈ ನಿಲಯದಲ್ಲಿ ಓದಲು ಮೇಜು, ಕುರ್ಚಿ, ಮಲಗುವ ಮಂಚ, ಪುಸ್ತಕಗಳು ಮತ್ತು ತಮ್ಮ ಬಟ್ಟೆಗಳನ್ನು ಇಟ್ಟುಕೊಳ್ಳಲು ಬೀರು, ಆರೋಗ್ಯದ ದೃಷ್ಟಿಯಿಂದ ಸೊಳ್ಳೆಪರದೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಜತೆಗೆ ಬಿಸಿನೀರಿನ ಕೊರತೆಯೊಂದಿಗೆ ವಿದ್ಯುಚ್ಚಕ್ತಿಯ ಸಮಸ್ಯೆಯಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ. ಇದರಿಂದ ಹಾಸ್ಟೆಲ್‌ಗಳಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಹದಾಸೆಯಿಂದ ಸೇರಿದ್ದ ವಿದ್ಯಾರ್ಥಿಗಳಿಗೆ ನಿರಾಶೆಯ ಕಾರ್ಮೋಡ ಕವಿದಿದೆ.
ನಿಲಯಕ್ಕೆ ಹೊಂದಿಕೊಂಡಂತೆ ಪಾಳು ಜಾಗವಿದ್ದು ಅದರಲ್ಲೇ ಶೌಚಾಲಯ ಹಾಗೂ ಸ್ನಾನದ ಗೃಹವಿದೆ. ಹೊರಾಂಗಣಕ್ಕೆ ಸೇರಿದ ಹಾಗೆ ಇರುವ ನಿಲಯದೊಳಗೆ ಯಾವಾಗ ಬೇಕಾದರೂ ಹಾವು ಹಲ್ಲಿಗಳು ಸುಳಿದಾಡುತ್ತವೆ. ಏನಾದರೂ ಅವಘಡಗಳು ನಡೆದರೂ ವಿದ್ಯಾರ್ಥಿಗಳು ಸಲೀಸಾಗಿ ತುತ್ತಾಗುತ್ತಾರೆ. ಈ ನಿಲಯವು ವಾಸದ ಮನೆಯಾಗಿದ್ದು ವಿದ್ಯಾರ್ಥಿನಿಲಯಕ್ಕಾಗಿ ಬಾಡಿಗೆಗೆ ಪಡೆದು ಪ್ರತಿ ತಿಂಗಳು 10,325 ಬಾಡಿಗೆ ನೀಡಲಾಗುತ್ತಿದೆ. ಈ ನಿಲಯದಲ್ಲಿ ಕಾಯಂ ಮೇಲ್ವಿಚಾರಕರಿಲ್ಲದೇ ಮೇಲೂರು ಗ್ರಾಮದ ಹಾಸ್ಟೆಲ್‌ನಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಲೋಕೇಶ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಹೀಗಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯವನ್ನು ಹೊಸದಾಗಿ ನಿರ್ಮಿಸುವ ಮೂಲಕ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.
ಕೆ.ಟಿ. ಮೋಹನ್‌ಕುಮಾರ್